ಮಡಿಕೇರಿ, ಸೆ. 8: ತೀವ್ರ ಅತಿವೃಷ್ಟಿಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ, ಕಾಫಿ, ಸಾಂಬಾರ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ವರದಿಯನ್ನು ಸೆಪ್ಟೆಂಬರ್ 15 ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯ ಭಾಸ್ಕರ ಅವರು ನಿರ್ದೇಶನ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ ಸಂಬಂಧ ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಬೆಳೆ ನಷ್ಟ ಸಂಬಂಧ ಸರ್ಕಾರಕ್ಕೆ ತಾ. 15 ರೊಳಗೆ ವರದಿ ಸಲ್ಲಿಸ ಬೇಕಿರುವದರಿಂದ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಾ. 12 ರೊಳಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ವರದಿ ನೀಡಬೇಕು ಎಂದು ಅವರು ಸೂಚನೆ ನೀಡಿದರು.
ಪ್ರಕೃತಿ ವಿಕೋಪದಿಂದಾಗಿ ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಡಿದುಕೊಂಡಿದ್ದು, ಇಂತಹ ಅತಿವೃಷ್ಟಿ ಪ್ರದೇಶಗಳಿಗೆ ತಾ. 12 ರೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೆಸ್ಕ್ ಇಂಜಿನಿಯರ್ಗೆ ಸ್ಪಷ್ಟ ಸೂಚನೆ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿದ ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಸೋಮಶೇಖರ ಅವರು ಕಾಲೂರು, ಹಮ್ಮಿಯಾಲ, ಮುಟ್ಲು, ಹಚ್ಚಿನಾಡು, ತಂತಿಪಾಲ, ಮೇಘತ್ತಾಳು, ಆವಂಡಿ ಮತ್ತು ದೇವಸ್ತೂರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ. ಈ ಗ್ರಾಮಗಳಿಗೆ 3-4 ದಿನಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗುವದು ಎಂದರು.
ಕಾಂಡನಕೊಲ್ಲಿ, ಕತ್ತಲೆಕಾಡು ಮತ್ತಿತರ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಈ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.
ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಬೇಕು. ಈ ಕಾರ್ಯದಲ್ಲಿ ವಿಳಂಬ ಮಾಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ನಿರ್ದೇಶನ ನೀಡಿದರು.
ವಿಶೇಷ ಅನ್ನಭಾಗ್ಯ ಯೋಜನೆಯಡಿ ಆಹಾರ ಪದಾರ್ಥ ದೊರೆತಿದೆ. ಆದರೆ ಪ್ರತಿ ತಿಂಗಳು ನೀಡುವ 35 ಕೆ.ಜಿ.ಅಕ್ಕಿ ಇನ್ನೂ ತಲಪಿಲ್ಲ ಎಂಬ ದೂರುಗಳು ಹಟ್ಟಿಹೊಳೆ ಗ್ರಾಮದ ಸಂತ್ರಸ್ತರಿಂದ ಕೇಳಿ ಬಂದಿದ್ದು, ಕೂಡಲೇ ಪ್ರತಿ ತಿಂಗಳು ನೀಡುವ ಪಡಿತರ ಆಹಾರವನ್ನು ಪೂರೈಸುವಂತೆ ಆಹಾರ ಇಲಾಖೆ
(ಮೊದಲ ಪುಟದಿಂದ) ಉಪ ನಿರ್ದೇಶಕರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬಗ್ಗೆ ಮಾಹಿತಿ ನೀಡಿದ ಆಹಾರ ಇಲಾಖೆಯ ಉಪ ನಿರ್ದೇಶಕ ಸದಾಶಿವಯ್ಯ ಅವರು ಪ್ರತಿ ತಿಂಗಳ ಪಡಿತರ ಆಹಾರ ಪದಾರ್ಥ ಬಂದಿದ್ದು, ವಿತರಿಸಲಾಗುವದು. ಹಾಗೆಯೇ 250 ಕೆ.ಎಲ್. ಸೀಮೆಎಣ್ಣೆ ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು.
ಸಂತ್ರಸ್ತ ಕುಟುಂಬದ ಮಕ್ಕಳಿಗೆ ವಿದ್ಯಾರ್ಜನೆಗೆ ಯಾವದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅತಿವೃಷ್ಟಿಯಿಂದ ಹಾನಿಯಾಗಿರುವ ಶಾಲಾ ಹಾಗೂ ಅಂಗನವಾಡಿ ಕಟ್ಟಡಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯ ದರ್ಶಿ ಅವರು ಸಲಹೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಯನ್ನು ಆದಷ್ಟು ಶೀಘ್ರ ವೈಜ್ಞಾನಿಕವಾಗಿ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಯಾವದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಗಮನಹರಿಸಬೇಕು ಎಂದು ಟಿ.ಎಂ.ವಿಜಯ ಭಾಸ್ಕರ್ ಅವರು ಸೂಚನೆ ನೀಡಿದರು.
ಸಂತ್ರಸ್ತ ಕುಟುಂಬಗಳಿಗೆ ಬೇಗ ಮನೆ ನಿರ್ಮಿಸಿ ಕೊಡಬೇಕಿದೆ. ಆ ನಿಟ್ಟಿನಲ್ಲಿ ಜಾಗ ಎಲ್ಲಿ ಗುರ್ತಿಸಲಾಗಿದೆ? ಗುರುತಿಸಿರುವ ಸ್ಥಳಕ್ಕೆ ಸಂತ್ರಸ್ತರು ತೆರಳು ತ್ತಾರೆಯೇ? ಯಾವ ಮಾದರಿಯ ಮನೆ ನಿರ್ಮಾಣ ಮಾಡಬೇಕು ಅಥವಾ ಹಣ ನೀಡಿದರೆ ಸಂತ್ರಸ್ತರೇ ಮನೆ ನಿರ್ಮಿಸಿಕೊಳ್ಳಲು ಸಿದ್ಧರಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸಲಹೆ ಮಾಡಿದರು.
ಈ ಬಗ್ಗೆ ಮಾಹಿತಿ ನೀಡಿದ ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ಈಗಾಗಲೇ ಕೆ. ನಿಡುಗಣೆ, ಕರ್ಣಂಗೇರಿ, ಸಂಪಾಜೆ ಮತ್ತು ಮಾದಾಪುರದ ಬಳಿ ಜಾಗ ಗುರ್ತಿಸಲಾಗಿದ್ದು, ಸುಮಾರು 816 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಬೇಕಿದೆ ಎಂದು ವಿವರಿಸಿದರು.
ಸಂತ್ರಸ್ತ 816 ಕುಟುಂಬಗಳಲ್ಲಿ 240 ಮನೆಗಳು ಪೂರ್ಣ ಹಾನಿ, 510 ತೀವ್ರತರದ ಮನೆಗಳು ಹಾನಿ ಯಾಗಿವೆ. ಹಾಗೆಯೇ ಮಡಿಕೇರಿಯಲ್ಲಿ 43 ಮತ್ತು ಕುಶಾಲನಗದಲ್ಲಿ 23 ಮನೆಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದ ಜಗದೀಶ ಅವರು, ಈ 816 ಕುಟುಂಬಗಳಲ್ಲಿ 300 ಕುಟುಂಬಗಳು ಹಣ ನೀಡಿದಲ್ಲಿ ಅವರೇ ಮನೆ ನಿರ್ಮಿಸಿಕೊಳ್ಳಲು ಸಿದ್ಧರಿದ್ದಾರೆ. ಉಳಿದಂತೆ ಮನೆ ನಿರ್ಮಿಸಿಕೊಡಬೇಕಿದೆ ಎಂದರು.
ಈ ಬಗ್ಗೆ ಮತ್ತೊಮ್ಮೆ ಸಂತ್ರಸ್ತ ಕುಟುಂಬಗಳಿಂದಲೇ ನಿಖರ ಮಾಹಿತಿ ಪಡೆಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ ಶಾಶ್ವತ ಮನೆ ಕಲ್ಪಿಸುವ ತನಕ ಬಾಡಿಗೆ ಮನೆಯಲ್ಲಿ ವಾಸಿಸಲು ಹಣ ಭರಿಸುವಂತಾಗಬೇಕು ಎಂಬ ಬಗೆಯೂ ಕೇಳಿ ಬರುತ್ತಿದೆ ಎಂದು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದರು. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು.
ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರು ಹಲವು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ನಾನಾ ಇಲಾಖೆ ಅಧಿಕಾರಿಗಳು ಇದ್ದರು.