*ಗೋಣಿಕೊಪ್ಪಲು, ಸೆ. 8: ಬಡವರ ಬದುಕನ್ನು ಕಿತ್ತುಕೊಂಡಿದ್ದ ಲಾಟರಿ ದಂಧೆಯನ್ನು ಕರ್ನಾಟಕ ರಾಜ್ಯ ಸರ್ಕಾರÀ ನಿಷೇಧಿಸಿ 15 ವರ್ಷಗಳೇ ಕಳೆದಿದ್ದರೂ, ಹೊರರಾಜ್ಯಗಳ ಲಾಟರಿ ದಂಧೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.
ಕೇರಳ ರಾಜ್ಯದ ರೂ. 30, 50 ಹಾಗೂ 100 ರೂಪಾಯಿಗಳ ಲಾಟರಿ ಟಿಕೇಟ್ ಅನ್ನು ತಿತಿಮತಿ, ಪಾಲಿಬೆಟ್ಟ, ಬಾಳೆಲೆ, ಕೋಣನಕಟ್ಟೆ ಮೊದಲಾದ ಭಾಗಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಣದ ಆಸೆಗೆ ಬಲಿಯಾದ ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರು ತಾವು ದುಡಿದ ಹಣವನ್ನು ಲಾಟರಿಗೆ ಹಾಕಿ ಬರಿಕೈಯಲ್ಲಿ ಮನೆಗೆ ಹೋಗುವಂತಾಗಿದೆ. ಕೆಲವರು ಕೆಲಸಕ್ಕೆ ಹೋಗದೆ ಲಾಟರಿ ಜೂಜಿನಲ್ಲಿಯೇ ಮುಳುಗಿರುತ್ತಾರೆ.
ಈ ಎಲ್ಲ ಅವ್ಯವಹಾರ ಪೊಲೀಸರಿಗೆ ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ. ಲಾಟರಿ ಮಾರಾಟಗಾರರು ಪೊಲೀಸರ ಕೈ ಬಿಸಿ ಮಾಡುತ್ತಿರುವದರಿಂದ ತಮ್ಮ ವ್ಯಾಪ್ತಿಯಲ್ಲಿಯೇ ಇಂತಹ ದಂಧೆ ನಡೆಯುತ್ತಿದ್ದರೂ ಗೊತ್ತಿಲ್ಲದ ನಾಟಕವಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಕೂಲಿಯನ್ನೇ ನಂಬಿ ಬದುಕು ನೂಕುವ ಕಾರ್ಮಿಕರು ಇದೀಗ ಮತ್ತೆ ಬೀದಿ ಪಾಲಾಗುವ ಸ್ಥಿತಿಗೆ ಹೋಗುತ್ತಿದ್ದಾರೆ. ಪತ್ರಿಕೆಯಲ್ಲಿ ಈ ಬಗ್ಗೆ ಸುದ್ದಿ ಬಂದಾಗ ಒಂದಷ್ಟು ದಿನ ಪೊಲೀಸರು ಅಲ್ಲಿ ಇಲ್ಲಿ ಓಡಾಡುತ್ತಾರೆ. ಆ ಮೇಲೆ ಮೌನ ವಹಿಸುತ್ತಾರೆ. ಹಿಂಬಾಗಿಲಿನಿಂದ ಅವರೆ ದಂಧೆಕೋರರಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದರ ಬಗ್ಗೆ ಪೊಲೀಸ್ ವರಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ ತಡೆಗಟ್ಟಬೇಕು ಎಂದು ಸಾರ್ವಜನಿಕರು ಹಾಗೂ ಕಾರ್ಮಿಕ ಕುಟುಂಬದ ಮಹಿಳೆಯರು ಒತ್ತಾಯ ಪಡಿಸಿದ್ದಾರೆ. - ಎನ್.ಎನ್. ದಿನೇಶ್.