ಸಿದ್ದಾಪುರ, ಸೆ. 8: ದೇವರಕಾಡು ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿದು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಸದಸ್ಯೆ ಮೇಲೆ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದ ಅರಣ್ಯ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಜ್ಯೋತಿ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಲು ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯತ್ ಸದಸ್ಯೆ ಜಮೀಲ ಬೃಹತ್ ಗಾತ್ರದ ಮತ್ತಿ ಮರವನ್ನು ಕಡಿದು ಉರುಳಿಸಿದ್ದರು ಎಂದು ಅರಣ್ಯಾಧಿಕಾರಿ ವಿಲಾಸ್ ಕೆ.ಇ. ತಿಳಿಸಿದ್ದಾರೆ. ಈ ಪ್ರದೇಶವು ದೇವರಕಾಡು ವ್ಯಾಪ್ತಿಗೆ ಒಳಪಟ್ಟಿದ್ದು ಜಮೀಲ ಅಕ್ರಮವಾಗಿ ಮರ ಕಡಿದು ಪೀಠೋಪಕರಣ ಸಿದ್ದಪಡಿಸಲು ಮುಂದಾಗಿದ್ದರು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
ಜಮೀಲ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಪ್ರಕಾರ ಸೆಕ್ಷನ್ 24 ಈ ಮತ್ತು 33 ಅರಣ್ಯ ಅಧಿನಿಯಮ 1969 ಪ್ರಕಾರ 144 ಮತ್ತು 165 ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಅರುಣ್ ಸಿ.ಆರ್.ಉಪ ವಲಯ ಅರಣ್ಯಾಧಿಕಾರಿ ವಿಲಾಸ್ ಕೆ.ಈ., ಅರಣ್ಯ ವೀಕ್ಷಕ ಆಲ್ರ್ಬಟ್, ವಾಸು ಭಾಗವಹಿಸಿದರು.