ಮಡಿಕೇರಿ, ಸೆ. 8: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ವ್ಯಾಪಕ ಹಾನಿಯ ಬಗ್ಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ವಿಶ್ಲೇಷಣೆ ನಡೆಸಿದರು. ಕೊಡಗು ಜಿಲ್ಲೆಯಲ್ಲಿ ಕುಟುಂಬಗಳಿಗೆ ಉಂಟಾಗಿರುವ ಹಾನಿಯ ಬಗ್ಗೆ ನಡೆಸಿದ ಸರ್ವೇಕ್ಷಣೆ ವರದಿಯನ್ನು ಕೊಡಗು ಜಿಲ್ಲೆಯ ನಿರ್ದೇಶಕ ಯೋಗೀಶ್ ನೀಡಿದರು.

ಜಿಲ್ಲೆಯಲ್ಲಿ ಸುಮಾರು 1,715 ಯೋಜನೆಯ ಕುಟುಂಬಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಈ ಪೈಕಿ 1.000 ಕುಟುಂಬಗಳ ಮನೆಗಳು ಸಂಪೂರ್ಣವಾಗಿ ನಾಶವಾಗಿದೆ. ಇಲ್ಲವೇ ಹಾನಿಯಾಗಿದೆ. ಸುಮಾರು ರೂ. 2.50 ಕೋಟಿಯ ಉಪಕರಣಗಳು, ಬೆಲೆಬಾಳುವ ವಸ್ತುಗಳು ಕಣ್ಮರೆಯಾಗಿದೆ. ಸುಮಾರು ರೂ. 1.00 ಕೋಟಿಗೂ ಮಿಕ್ಕಿ ವ್ಯವಹಾರದ ವಸ್ತುಗಳು ನಾಶವಾಗಿವೆ. 1,500 ಎಕರೆ ಕೃಷಿ ಸಂಪೂರ್ಣವಾಗಿ ನಾಶವಾಗಿದೆ. ಇಂತಹ ಕುಟುಂಬಗಳಿಗೆ ಪುನಶ್ಚೇತನಗೊಳ್ಳಲು ನೀಡಬೇಕಾದ ಸಹಕಾರದ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು.

ಈ ಕುರಿತಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದಿಂದ ಕೊಡಗು ಜಿಲ್ಲೆಯಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಯಾ ಹಾನಿಯಾದವರಿಗೆ ತಲಾ ರೂ. 25,000ದಂತೆ ಗೃಹ ನಿರ್ಮಾಣಕ್ಕೆ ಕ್ಷೇತ್ರ ಧರ್ಮಸ್ಥಳದಿಂದ ನೆರವನ್ನು ಘೋಷಿಸಿದರು. ಇದೀಗ 1044 ಮನೆಗಳಿಗೆ ರೂ. 2.61 ಕೋಟಿ ಮಂಜೂರು, ಅದೇ ರೀತಿ ಮನೆಯಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು 1,335 ಮನೆಗಳಿಗೆ ರೂ. 15,000ದಂತೆ ರೂ. 2 ಕೋಟಿಯನ್ನು ಹಾಗೂ ಜಿಲ್ಲೆಯಲ್ಲಿ 1,117 ಕುಟುಂಬಗಳ 1450 ಎಕರೆ ಕೃಷಿ ಭೂಮಿ ನಾಶವಾಗಿದ್ದು, ಈ ಕುಟುಂಬಗಳಿಗೆ ಕೃಷಿಯನ್ನು ಪುನರ್ ನಿರ್ಮಾಣ ಮಾಡಲು ತಲಾ ರೂ. 25,000ದಂತೆ ರೂ. 2.80 ಕೋಟಿಯನ್ನು ನೀಡುವದಾಗಿ ತಿಳಿಸಿದರು.

ಅಲ್ಲದೆ ಸಕಲೇಶಪುರ ಮತ್ತು ಅರಕಲಗೂಡು ಮತ್ತಿತರ ಪ್ರದೇಶಗಳಲ್ಲಿ ಹಾನಿಗೊಂಡಿರುವ ಕುಟುಂಬಗಳಿಗೆ ತಲಾ ರೂ. 10,000ದಂತೆ ರೂ. 60 ಲಕ್ಷ ಮಂಜೂರು ಮಾಡಲಾಗುವದು. ಹೀಗೆ ಒಟ್ಟಾರೆಯಾಗಿ ರೂ. 8 ಕೋಟಿ ಮೊತ್ತವನ್ನು ನೇರವಾಗಿ ಸಂತ್ರಸ್ತರಿಗೆ ತಲಪಿಸುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರಿಗೆ ಸೂಚಿಸಿದರು. ಪರಿಹಾರಧನವನ್ನು ಆಯಾ ಸೊತ್ತುಗಳ ನಿರ್ಮಾಣ, ಖರೀದಿಯ ಸಮಯದಲ್ಲಿ ವಿತರಿಸಲು ಕ್ರಿಯಾ ಯೋಜನೆಯನ್ನು ತಯಾರಿಸುವಂತೆ ವೀರೇಂದ್ರ ಹೆಗ್ಗಡೆಯವರು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು.

ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂತಿಗೆ ಸಮರ್ಪಣೆ

ಇದೇ ಸಂದರ್ಭ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 6750 ಖಾಯಂ ಸಿಬ್ಬಂದಿಗಳು ತಮ್ಮ ಮೂರು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದು, ಇದಕ್ಕೆ ಪೂರಕವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಣಿಗೆಯನ್ನು ಸೇರಿಸಿ ಒಟ್ಟಾರೆ ರೂ. 2 ಕೋಟಿಯನ್ನು ಮುಖ್ಯಮಂತ್ರಿ ಕೊಡಗು ಪರಿಹಾರ ನಿಧಿಗೆ ಸಮರ್ಪಿಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಸಂಬಂಧ ಯೋಜನೆಯ ಕಾರ್ಯಕರ್ತರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೊಡಗು ಜಿಲ್ಲೆಯ ವ್ಯಾಪಕ ಹಾನಿಯ ಬಗ್ಗೆ ಪ್ರತ್ಯಕ್ಷ ವರದಿಯನ್ನು ನೀಡಿ ರೂ. 2 ಕೋಟಿ ಮೊತ್ತದ ಚೆಕ್ಕನ್ನು ನೀಡಲಿದ್ದಾರೆ ಎಂದರು.

ಸ್ವಸಹಾಯ ಸಂಘ ಕಂತುಗಳ ಪಾವತಿಯಲ್ಲಿ ವಿರಾಮ

ಈಗ ಬಂದಿರುವ ವರದಿಯಂತೆ ಸ್ವಸಹಾಯ ಸಂಘಗಳ ಸುಮಾರು 1,000 ಸದಸ್ಯರುಗಳಿಗೆ ತಾವು ಪಡಕೊಂಡಿರುವ ಸ್ವಸಹಾಯ ಸಂಘಗಳ ಸಾಲಗಳನ್ನು ಮರುಪಾವತಿಸಲು ಸಾಧ್ಯವಿಲ್ಲದೇ ಇರುವದರಿಂದ ಇದರ ಮರುಪಾವತಿ ಕಂತುಗಳನ್ನು 12 ವಾರಗಳವರೆಗೆ ಮುಂದೂಡುವದು; ಈ ಅವಧಿಯಲ್ಲಿ ಈ ಸದಸ್ಯರ ಬ್ಯಾಂಕ್ ಬಡ್ಡಿಯನ್ನು ಯೋಜನೆಯೇ ಪಾವತಿಸುವಂತೆ ಅವರು ಸೂಚಿಸಿದರು. ಇದಲ್ಲದೆ ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಅಡಚಣೆಯುಂಟಾಗಿ ಆದಾಯ ಕಡಿಮೆಯಾಗಿದ್ದವರು ಕಡಿಮೆ ಮೊತ್ತದ ಕಂತನ್ನು ಕಟ್ಟಬಯಸುವವರು ಈ ವಿಷಯವನ್ನು ಸಂಘದಲ್ಲಿ ಮುಕ್ತವಾಗಿ ಚರ್ಚಿಸಿ ಅನುಮತಿ ಪಡಕೊಳ್ಳಬಹುದು. ಆದರೆ ಯಾವದೇ ಕಾರಣಕ್ಕೆ ಸಂಘದ ಶಿಸ್ತನ್ನು ಕಳೆದುಕೊಳ್ಳಬಾರದು. ಇದರಿಂದ ಭವಿಷ್ಯದಲ್ಲಿ ಅವರ ಆರ್ಥಿಕ ಸಾಮಥ್ರ್ಯಕ್ಕೆ ಧಕ್ಕೆಯುಂಟಾಗಬಹುದು ಎಂದು ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಈ ಸಂದರ್ಭ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಕರಾವಳಿ ಪ್ರಾದೇಶಿಕ ನಿರ್ದೇಶಕ ಶ್ರೀ ಮಹಾವೀರ ಆಜ್ರಿ, ಮೈಸೂರು ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ಕೊಡಗು ಜಿಲ್ಲೆ ನಿರ್ದೇಶಕ ಯೋಗೀಶ್ ಮತ್ತಿತರರು ಹಾಜರಿದ್ದರು.