ಮಡಿಕೇರಿ, ಸೆ. 8: ಜಿಲ್ಲೆಯಲ್ಲಿ ಅದರಲ್ಲೂ ಮಡಿಕೇರಿ ವಿಭಾಗದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಬಳಿಕ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಮುಂದಾಗಿರುವ ಕೊಡಗು ಫಾರ್ ಟುಮಾರೋ, ಸ್ವಯಂ ಸೇವಾ ಸಂಸ್ಥೆಯ ಯುವಕರ ತಂಡ ಇಂದು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ನಡೆಸಿತು. ಗಾಳಿಬೀಡು ರಸ್ತೆ, ನವೋದಯ ಶಾಲಾ ವಿಭಾಗದಲ್ಲಿ ಇಂದು ಸ್ವಚ್ಛತೆ ನಡೆಸಲಾಗಿದ್ದು, ಸಂಜೆತನಕ ಸುಮಾರು ಒಂದೂವರೆ ಲೋಡ್ ಪಿಕಪ್ ವಾಹನದಷ್ಟು ತ್ಯಾಜ್ಯಗಳು ಸಂಗ್ರಹವಾಗಿವೆ. ಹೆಚ್ಚಾಗಿ, ಮದ್ಯದ ಬಾಟಲಿಗಳು, ನೀರಿನ ಬಾಟಲಿಗಳು, ಪ್ಲಾಸ್ಟಿಕ್ನಂತಹ ಕಸ ಸಂಗ್ರಹವಾಗಿದೆ. ಇಂದು 30 ಮಂದಿಯ ತಂಡ ಸ್ವಚ್ಛತಾ ಕಾರ್ಯ ನಡೆಸಿದೆ. ಸಂಗ್ರಹಿತ ಈ ತ್ಯಾಜ್ಯಗಳನ್ನು ಸೂಕ್ತರೀತಿಯಲ್ಲಿ ಪ್ಯಾಕ್ ಮಾಡಿ ಬಳಿಕ ಮೈಸೂರಿನಲ್ಲಿರುವ ತ್ಯಾಜ್ಯ ಶುದ್ಧೀಕರಣ ಕೇಂದ್ರದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ತಾ. 9ರಂದು (ಇಂದು) ಈ ಕಾರ್ಯ ಮುಂದುವರಿಯಲಿದೆ ಎಂದು ಕೊಡಗು ಫಾರ್ ಟುಮಾರೋ ಸ್ವಯಂ ಸೇವಕರು ಮಾಹಿತಿ ನೀಡಿದ್ದಾರೆ.