ಕೂಡಿಗೆ, ಸೆ. 8 : ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೈಗಾರಿಕಾ ಬಡಾವಣೆಯ ಸಮೀಪವಿರುವ ಸುಂದರನಗರ ಗ್ರಾಮದ ಜವರನಾಯಕನ ಕೆರೆಯ ಜಾಗವನ್ನು ಕೈಗಾರಿಕಾ ಕೇಂದ್ರದವರು ನೀಡಿದ್ದಾರೆ ಎಂದು ಉದ್ಯಮಿಯೋರ್ವರು ಕೆರೆಯನ್ನು ಸಮತಟ್ಟು ಮಾಡಲು ಮುಂದಾದ ಸಂದರ್ಭ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸುಂದರನಗರದ 5/1 ರಲ್ಲಿ 1.20 ಎಕರೆ ಪೈಸಾರಿ ಜಾಗದಲ್ಲಿ ಸುಮಾರು 40 ವರ್ಷಗಳಿಂದಲೂ ಜವರನಾಯಕನ ಕೆರೆಯಿದೆ. ಸಮೀಪದ ಹಾರಂಗಿ ಕಾಡಿನಿಂದ ಬರುವ ನೀರು ಈ ಕೆರೆಗೆ ಸೇರುವ ಮೂಲಕ ಕೆಳಭಾಗದಲ್ಲಿರುವ ಆನೆಕೆರೆಯು ತುಂಬಲು ಅನುಕೂಲವಾಗುತ್ತಿದೆ. ಈ ಎರಡು ಕೆರೆಗಳಿಂದ ಸಾವಿರಾರು ಎಕರೆ ಪ್ರದೇಶಕ್ಕೆ ವ್ಯವಸಾಯಕ್ಕೆ ಅನುಕೂಲ ಹಾಗೂ ಅಂತರ್ಜಲ ಹೆಚ್ಚುವ ಮೂಲಕ ಕುಡಿಯುವ ನೀರಿಗೂ ಅನುಕೂಲ ವಾಗುತ್ತಿದೆ.

ಆದರೆ, ಜವರನಾಯಕನ ಕೆರೆಯ ಜಾಗವನ್ನು ಕೂಡ್ಲೂರು ಕೈಗಾರಿಕಾ ಪ್ರದೇಶದ ಕೇಂದ್ರದವರು ತಮಗೆ ನೀಡಿದ್ದಾರೆ ಎಂದು ಉದ್ಯಮಿ ಯೋರ್ವರು ಕೆರೆಗೆ ಮಣ್ಣು ತುಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೆರೆಯ ಆಸುಪಾಸಿನಲ್ಲೇ ರುದ್ರಭೂಮಿಯು ಇದ್ದು, ಕೆರೆ ಮತ್ತು ರುದ್ರಭೂಮಿ ಜಾಗವು ತಮಗೆ ಗುರುತಿಸಲಾಗಿದೆ ಎಂದು ಕಳೆದ ಒಂದು ವರ್ಷದ ಹಿಂದೆ ಇದೇ ವಿಷಯವಾಗಿ ರುದ್ರಭೂಮಿ ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕಂದಾಯ ಇಲಾಖೆಯ ಅಧಿಕಾರಿ ಸರ್ವೇ ನಡೆಸಿ ರುದ್ರಭೂಮಿ ಜಾಗವನ್ನು ಗುರುತಿಸಿದ್ದರು. ಇದೀಗ ರುದ್ರಭೂಮಿಯ ಪಕ್ಕದಲ್ಲಿರುವ ಕೆರೆಯನ್ನು ಕೈಗಾರಿಕಾ ಅಭಿವೃದ್ಧಿ ನಿಗಮವು ಗ್ರಾಮ ಪಂಚಾಯಿತಿಗೆ ಅಥವಾ ತಾಲೂಕು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡದೆ, ಆಕ್ರಮಿಸಿಕೊಂಡು ಮಣ್ಣು ಸುರಿದು ಕೆರೆಯನ್ನು ಮುಚ್ಚಲು ಮುಂದಾಗಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಸುಂದರನಗರ ವಾರ್ಡಿನ ಸದಸ್ಯೆ ಜ್ಯೋತಿಪ್ರಮೀಳಾ ಹಾಗೂ ನೂರಾರು ಗ್ರಾಮಸ್ಥರು ವಿರೋಧಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದ್ದು, ಸದಸ್ಯೆ ಜ್ಯೋತಿಪ್ರಮೀಳಾ ಅವರು ಹಾಗೂ ನೂರಾರು ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕೆರೆಯನ್ನು ಮುಚ್ಚುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ತಾಲೂಕು ತಹಶೀಲ್ದಾರ್ ಅವರಿಗೆ ಸ್ಥಳ ಪರಿಶೀಲಿಸಿ, ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.

ಕಳೆದ ಬಾರಿ ಸರ್ವೇ ನಡೆಸಿದ ಬಗ್ಗೆ ಈಗಾಗಲೇ ವರದಿ ಇರುವದರಿಂದ ಕಂದಾಯ ಇಲಾಖೆಯಿಂದ ಜಾಗವನ್ನು ಗುರುತಿಸಿ ಗ್ರಾಮಕ್ಕೆ ಅನುಕೂಲ ವಾಗುವಂತೆ ಕೆರೆಯನ್ನು ಮುಚ್ಚದೆ ಅಭಿವೃದ್ಧಿ ಪಡಿಸಲು ಸಹಕಾರ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಡಳಿತ ಮಂಡಳಿಯ ಗಮನಕ್ಕೆ ತರಲಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ಫಿಲೋಮಿನಾ ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿ ಆಯೆಷಾ ಕೆರೆಯ ಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭ ಆಯೆಷಾ ಗ್ರಾಮಸ್ಥರೊಂದಿಗೆ ಮಾತನಾಡುತ್ತಾ, ಈ ಜಾಗಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆಯಿಂದ ಇದುವರೆಗೂ ಸಮರ್ಪಕ ಮಾಹಿತಿ ಬಂದಿಲ್ಲ. ಕೆರೆಯನ್ನು ಮುಚ್ಚಲು ಬಿಡುವದಿಲ್ಲ ಎಂದರು.

ನಂತರ ಜಿಲ್ಲಾ ಪಂಚಾಯ್ತಿ ಸದಸ್ಯೆ ಕೆ.ಆರ್.ಮಂಜುಳಾ ಭೇಟಿ ನೀಡಿ, ಕೈಗಾರಿಕಾ ಅಭಿವೃದ್ಧಿ ನಿಗಮದವರು ನೀಡಿರುವ ಸ್ಥಳದ ಸರ್ವೇ ನಂ ಬೇರೆಯಾಗಿದ್ದರೂ ಉದ್ಯಮಿಗಳು ರಸ್ತೆಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮಸ್ಥರಿಗೆ ಬೇಕಾಗಿರುವ ಕೆರೆ ಹಾಗೂ ರುದ್ರಭೂಮಿಯನ್ನು ಮಣ್ಣು ಸುರಿದು ಸಮತಟ್ಟು ಮಾಡಲು ಹೊರಟಿರುವದು ಸರಿಯಲ್ಲ. ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಸ್ಥಳ ಪರಿಶೀಲಿಸಿ ಕಳೆದ ಸಾಲಿನಲ್ಲಿ ಸರ್ವೇ ಮಾಡಿ ಗುರುತಿಸಿರುವ ಈ ಜಾಗವನ್ನು ಗ್ರಾಮಸ್ಥರ ಅನುಕೂಲಕ್ಕೆ ಅಧಿಕಾರಿಗಳು ಅನುವು ಮಾಡಬೇಕು ಎಂದು ಆಗ್ರಹಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಕೆ.ಭೋಗಪ್ಪ, ಮಂಜುನಾಥ್, ಸ್ಥಳೀಯ ಮುಖಂಡರಾದ ಮಂಜುನಾಥ್, ಕುಮಾರಸ್ವಾಮಿ, ಗ್ರಾಮದ ಜಯಮ್ಮ, ದಿನೇಶ್, ಲೋಹಿತ್, ಶಶಿ, ರಾಜು, ಮುರುಗ, ಸುಬ್ರಮಣಿ ಹಾಗೂ ಗ್ರಾಮಸ್ಥರು ಇದ್ದರು.