ಮಡಿಕೇರಿ, ಸೆ. 7: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ ಹಾಗೂ ಮೈಕ್ರೋಕ್ರೆಡಿಟ್ ಯೋಜನೆಗಳಡಿಯಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮಗಳಿಗೆ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 06 ಕೊನೆ ದಿನವಾಗಿದೆ. ಅರ್ಜಿ ನಮೂನೆಗಳನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ, ವೀರಾಜಪೇಟೆ ತಾಲೂಕು ಹಾಗೂ ತಾಲೂಕು ಕಲ್ಯಾಣಾಧಿಕಾರಿಗಳು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಪೊನ್ನಂಪೇಟೆ ಇಲ್ಲಿ ಉಚಿತವಾಗಿ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಹೊಸ ಬಡಾವಣೆ, ರೇಸ್ ಕೋರ್ಸ್ ಮಡಿಕೇರಿ, ಇವರನ್ನು ಹಾಗೂ ದೂ. 08272-228857 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕ ಕುಮಾರ ಅವರು ತಿಳಿಸಿದ್ದಾರೆ.
ಇನ್ನಷ್ಟು ಮಾಹಿತಿ: ಸಾಮಾನ್ಯ ಅರ್ಹತೆಗಳು: ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ ಕನಿಷ್ಟ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 18 ದಿಂದ 60 ವರ್ಷದೊಳಗಿನ ವಯೋಮಾನದವರಾಗಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶವಾದಲ್ಲಿ ರೂ. 1.50 ಲಕ್ಷ ಹಾಗೂ ನಗರ ಪ್ರದೇಶವಾದಲ್ಲಿ ರೂ. 2 ಲಕ್ಷದ ಮಿತಿಯೊಳಗಿರಬೇಕು. ಅರ್ಜಿದಾರರ ಕುಟುಂಬದ ಯಾವದೇ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ ಸಂಸ್ಧೆಯಲ್ಲಿ ನೌಕರಿಯಲ್ಲಿರಬಾರದು, ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವದೇ ಸೌಲಭ್ಯ ಪಡೆದಿರಬಾರದು.
ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪರಿಶಿಷ್ಟ ಪಂಗಡದ ವಿಕಲಚೇತನ ಫಲಾನುಭವಿಗಳ ಲಭ್ಯವಿರುವ ಪಟ್ಟಿಯಿಂದ ನೇರವಾಗಿ ಸಂದರ್ಶನ ಮಾಡಿ ಶೇ.5ರಷ್ಟು ಮೀಸಲಾತಿಯನ್ನು ನೀಡಿ ಸೌಲಭ್ಯ ಕಲ್ಪಿಸಲಾಗುವದು. ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್ನೊಂದಿಗೆ ಬ್ಯಾಡ್ಜ್ ಅನ್ನೂ ಹೊಂದಿರಬೇಕು.
ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಕುಟುಂಬದ ವಾರ್ಷಿಕ ವರಮಾನ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್, ಅರ್ಜಿದಾರರು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ವಿವರಗಳನ್ನೊಳಗೊಂಡ ಪಾಸ್ ಬುಕ್ನ ಮೊದಲ ಪುಟದ ಪ್ರತಿ, ಯೋಜನಾ ವರದಿ, ದರಪಟ್ಟಿ (ಅನ್ವಯವಾಗುವ ಘಟಕಗಳಿಗೆ), ವಾಹನವಾಗಿದ್ದಲ್ಲಿ, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪಡೆದ ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ನ ಪ್ರತಿ ವಯಸ್ಸು 50 ವರ್ಷದೊಳಗಿರುವ ಬಗ್ಗೆ ದೃಢೀಕರಣ ಪತ್ರ
ಸ್ವಯಂ ಉದ್ಯೋಗ ಕಾರ್ಯಕ್ರಮ (ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ): ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಬ್ಯಾಂಕ್ ಸಹಯೋಗದೊಂದಿಗೆ ವಿವಿಧ ಉದ್ದೇಶಗಳಿಗಾಗಿ ಸಾಲ ಸೌಲಭ್ಯ ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿನ ಘಟಕ ವೆಚ್ಚ ಮತ್ತು ಸಹಾಯಧನದ ಮಿತಿ ಘಟಕ ವೆಚ್ಚ : ರೂ 5 ಲಕ್ಷದ ವರೆಗೆ ಸಹಾಯಧನ: ಘಟಕ ವೆಚ್ಚದ ಶೇ. 70 ರಷ್ಟು, ಗರಿಷ್ಠ ರೂ. 3.50 ಲಕ್ಷ. ಘಟಕ ವೆಚ್ಚ : ರೂ 5 ಲಕ್ಷ ಮೇಲ್ಪಟ್ಟು 10. ಲಕ್ಷದ ವರೆಗೆ ಸಹಾಯಧನ ಘಟಕ ವೆಚ್ಚದ ಶೇ.60 ರಷ್ಟು, ಗರಿಷ್ಠ ರೂ. 5 ಲಕ್ಷ.
ಘಟಕ ವೆಚ್ಚ : ರೂ 10 ಲಕ್ಷ ದಿಂದ ಮೇಲ್ಪಟು 20 ಲಕ್ಷದವರೆಗೆ ಸಹಾಯಧನ ಘಟಕ ವೆಚ್ಚದ ಶೇ. 50 ರಷ್ಟು, ಗರಿಷ್ಠ ರೂ.5 ಲಕ್ಷ.
ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸ್ವ ಸಹಾಯ ಗುಂಪುಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಪಂಗಡದ ಮಹಿಳಾ ಫಲಾಪೇಕ್ಷಿಗಳಿಗೆ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಒದಗಿಸಲಾಗುವದು. ಘಟಕ ವೆಚ್ಚದಲ್ಲಿ ಸಹಾಯಧನ ಮತ್ತು ಸಾಲದ ಮೊತ್ತವನ್ನು ನಿಗಮದಿಂದಲೇ ನೀಡಲಾಗುವದು. ಸಾಲದ ಹಣಕ್ಕೆ ಬಡ್ಡಿ ವಾರ್ಷಿಕ ಶೇ.4ರಷ್ಟಿದ್ದು, ಸಾಲದ ಹಣವನ್ನು ಬಡ್ಡಿ ಸಮೇತವಾಗಿ 36 ಮಾಸಿಕ ಸಮ ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು (ಕನಿಷ್ಟ 10 ಮಹಿಳಾ ಸದಸ್ಯರ ಸ್ವಸಹಾಯ ಗುಂಪಾಗಿರಬೇಕು).