ಈ ಬಾರಿ ಪ್ರಕೃತಿ ಮಾತೆಯ ಮುನಿಸು ಎಲ್ಲಾ ಜೀವಚರಗಳನ್ನು ಬೆಚ್ಚಿಬೀಳಿಸಿದೆ. ಸರ್ಕಾರ ಮತ್ತು ಸರ್ಕಾರೇತರರೆಲ್ಲಾ ಕೈ ಜೋಡಿಸಿ ತೊಂದರೆಗೊಳಗಾದವರನ್ನೆಲ್ಲ ಮೊದಲ ಹಂತದ ಪರಿಹಾರವಾಗಿ ಸುರಕ್ಷಿತ ಕೇಂದ್ರಗಳಿಗೆ ತಾತ್ಕಾಲಿಕವಾಗಿ ವರ್ಗಾಯಿಸಲಾಗಿದೆ.

ಮುಂದಿನ ದಿನಗಳಲ್ಲಿ ಪ್ರವಾಹದ ಪರಿಣಾಮಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುವ ಸಂಭವವಿರುತ್ತದೆ. ಮುಖ್ಯವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಅನೇಕ. ಪ್ರವಾಹ ನಂತರದ ಈ ಕಾಲಾವಧಿಯಲ್ಲಿ ಮುಖ್ಯವಾಗಿ ಗಾಳಿ, ನೀರು, ಆಹಾರ ಮತ್ತು ಕೀಟಗಳಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಂಭವವಿದೆ.

ರೋಗಕಾರಕ ಮಾರ್ಗಗಳು

ಕಲುಷಿತ ಗಾಳಿಯಿಂದ ಶೀತ, ಗಂಟಲು ಬೇನೆ, ವಿಷಮ ಶೀತ ಜ್ವರ, ಶ್ವಾಸಕೋಶ ಸೋಂಕು (ನ್ಯೂಮೋನಿಯ, ಕ್ಷಯ ಇತ್ಯಾದಿ). ಮಲಿನ ನೀರಿನಿಂದ ವಾಂತಿ-ಬೇಧಿ, ಟೈಫಾಯ್ಡ್, ಕಾಲರಾ, ಕಾಮಾಲೆ, ಇಲಿಜ್ವರ (ಲೆಪ್ಟೋ ಸ್ಪೈರೋಸಿಸ್). ಕಲುಷಿತ ಆಹಾರದಿಂದ ಆಹಾರ ವಿಷಪೂರಿತವಾಗುವದು, ಟೈಫಾಯ್ಡ್, ವಾಂತಿ ಬೇಧಿ, ಕಾಲರಾ. ಕೀಟಜನ್ಯ ರೋಗದಿಂದ ಮಲೇರಿಯಾ, ಡೆsÀಂಗಿ, ಚಿಕುನ್‍ಗುನ್ಯಾ, ಫೈಲೇರಿಯಾ, ಹಾವು ಚೇಳು ಕಡಿತ.

ಈ ಮೇಲ್ಕಂಡ ಹೆಚ್ಚಿನ ರೋಗಗಳು ನೀರು, ಆಹಾರಗಳ ನೈರ್ಮಲ್ಯದ ಕೊರತೆಯಿಂದಲೇ ಆಗುವಂತಹವು, ನಾವು ಸೇವಿಸುವ ಆಹಾರ ಕುಡಿಯುವ ನೀರು ಮಲಿನವಾಗಿದ್ದಲ್ಲಿ, ವೈಯಕ್ತಿಕ ಮತ್ತು ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರದೇ ಇದ್ದಲ್ಲಿ ರೋಗಗಳು ಬರುವ ಸಾದ್ಯತೆ ಹೆಚ್ಚಾಗಿರುತ್ತದೆ.

ರೋಗ ತಡೆಗಟ್ಟುವ ಬಗೆ

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವದು: ಊಟಕ್ಕೆ ಮೊದಲು, ಶೌಚದ ನಂತರ, ಅಡುಗೆ ತಯಾರಿಸುವ ಮೊದಲು ಕೈಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಬೆಳೆದ ಉಗುರುಗಳನ್ನು ಕತ್ತರಿಸಿಕೊಳ್ಳುತ್ತಿರಬೇಕು.

ಕುದಿಸಿ ಆರಿಸಿದ ನೀರನ್ನು ಶುಭ್ರ ಪಾತ್ರೆಗಳಲ್ಲಿ ಶೇಖರಿಸಿಟ್ಟುಕೊಂಡು ಕುಡಿಯಲು ಬಳಸುವದು. ಆಹಾರವನ್ನು ಚೆನ್ನಾಗಿ ಬೇಯಿಸಿ ಬಿಸಿ-ಬಿಸಿಯಾಗಿದ್ದಾಗಲೇ ಸೇವಿಸಬೇಕು. ಶೌಚಾಲಯದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡಬೇಕು. ನಾವು ಬಳಸುವ ಶೌಚಾಲಯವನ್ನು ಕಾಲಕಾಲಕ್ಕೆ ರಾಸಾಯನಿಕಗಳಿಂದ ಸ್ವಚ್ಛಗೊಳಿಸುತ್ತಿರಬೇಕು, ಶೌಚಾಲಯಕ್ಕೆ ಹೋಗುವಾಗ ಪಾದರಕ್ಷೆಗಳನ್ನು ಹಾಕಿಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಮೂಗು ಬಾಯಿಯನ್ನು ಶುಭ್ರ ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು. ವಾಂತಿ-ಬೇದಿಯಾದ ತಕ್ಷಣ ಪುನರ್ಜಲೀಕರಣ ದ್ರಾವಣ (ಔಖS) ಕುಡಿಸುವದು ಮತ್ತು ವೈದ್ಯರಿಗೆ ತೋರಿಸುವದು. ತಯಾರಿಸುವ ಆಹಾರವನ್ನು ಇಲಿ, ಹೆಗ್ಗಣ ಮುಂತಾದವುಗಳು ಕೆಡಿಸದಂತೆ ಸಂರಕ್ಷಿಸುವದು. ಕಚ್ಚಾ ಮತ್ತು ಬೇಯಿಸಿದ ಆಹಾರ ಪದಾರ್ಥಗಳನ್ನು ಬೇರೆ ಬೇರೆ ಜಾಗಗಳಲ್ಲಿ ಶೇಖರಿಸಿಡಬೇಕು, ಕೊಳೆತ ತರಕಾರಿ ಮತ್ತು ಸೊಪ್ಪುಗಳನ್ನು ಬೇರ್ಪಡಿಸಬೇಕು. ತರಕಾರಿ, ಸೊಪ್ಪುಗಳನ್ನು, ಮೀನು ಮಾಂಸವನ್ನು ಬೇಯಿಸುವ ಮುಂಚೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಬಳಸಬೇಕು. ಚಿಕ್ಕ ಮಕ್ಕಳಿಗೆ, ಗರ್ಭಿಣಿ ಬಾಣಂತಿಯರಿಗೆ ಮತ್ತು ವೃದ್ಧರಿಗೆ ಆಹಾರದ ವಿಷಯದಲ್ಲಿ ವಿಶೇಷ ಮುತುವರ್ಜಿವಹಿಸಬೇಕು. ಪ್ರವಾಹ ಸಂದರ್ಭದಲ್ಲಿ ಒಳನುಗ್ಗಿದ ನೀರು ಕುಡಿಯುವ ನೀರಿನ ಮೂಲಗಳೊಡನೆ ಮಿಶ್ರಣವಾಗಿದ್ದರೆ ತುರ್ತು ಶುದ್ಧಿಕರಣಗೊಳಿಸಲು ಬ್ಲೀಚಿಂಗ್ ಪೌಡರ್, ಹ್ಯಾಲೋಜಿನ್ ಮಾತ್ರೆಗಳ ಸಹಾಯದಿಂದ ಶುದ್ಧಗೊಳಿಸಿ ನಂತರ ಕುದಿಸಿ ಆರಿಸಿ ಕುಡಿಯಲು ಬಳಸಬೇಕು.

ಕೀಟ ಜನ್ಯ ರೋಗಗಳು ಬರದಂತೆ ತಡೆಗಟ್ಟುವ ವಿಧಾನ

ಸೊಳ್ಳೆ ಉತ್ಪತ್ತಿ ತಾಣಾಗಳಾದ ಮನೆಯ ಸುತ್ತಮುತ್ತಲಿನ ಗುಂಡಿಗಳಲ್ಲಿ, ಬಿಸಾಡಿದ ಪ್ಲಾಸ್ಟಿಕ್ ಬಾಟಲಿ, ತೆಂಗಿನ ಚಿಪ್ಪು, ಟಯರ್‍ಗಳಲ್ಲಿ ಶೇಖರಣೆಗೊಂಡ ನೀರು ನಿಲ್ಲದಂತೆ ನೋಡಿಕೊಳ್ಳವದು.

ಮನೆಯಲ್ಲಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು, ಡ್ರಂಗಳನ್ನು ಸದಾ ಮುಚ್ಚಿರುವಂತೆ ನೋಡಿಕೊಳ್ಳುವದು. ನಿಂತ ನೀರಿನ ಮೂಲಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆಗಳ ಲಾರ್ವಗಳ ಸಂಖ್ಯೆಯನ್ನು ಕಡಿಮೆ ಮಾಡಲು ಲಾರ್ವಾಹಾರಿ ಗಪ್ಪಿ, ಗ್ಯಾಂಬೂಸಿಯ ಎಂಬ ಜಾತಿಯ ಮೀನುಗಳನ್ನು ಸ್ಥಳೀಯ ಆಡಳಿತದ ಸಹಾಯದಿಂದ ಆರೋಗ್ಯ ಇಲಾಖೆಯ ಸರ್ವೇಕ್ಷಣ ವಿಭಾಗದಲ್ಲಿ ಪಡೆದುಕೊಂಡು ನೀರಿನ ಮೂಲಗಳಲ್ಲಿ ಹಾಕುವದು.

ಈಗಾಗಲೇ ಸೊಳ್ಳೆಗಳು ಇದ್ದಲ್ಲಿ ಅವುಗಳ ಕಡಿತದಿಂದ ಪಾರಾಗಲು ಎಲ್ಲರೂ ಮೈತುಂಬಾ ಉಡುಪುಗಳನ್ನು ತೊಡುವದು, ಕಿಟಕಿಯನ್ನು ಜಾಲರಿಯಿಂದ ಮುಚ್ಚುವದು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವದು, ಸೊಳ್ಳೆ ಬತ್ತಿಗಳನ್ನು ಬಳಸುವದು, ಸೊಳ್ಳೆ ಕಡಿತ ನಿರೋಧÀಕ ಕ್ರೀಮ್‍ಗಳನ್ನು ಬಳಸುವದು.

ಜ್ವರ ಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಂಡು ವೈದ್ಯರು ಸೂಚಿಸಿರುವ ಔಷಧಿಗಳನ್ನು ಸರಿಯಾಗಿ ಸೇವಿಸುವದು. ಬಯಲಲ್ಲಿ ಮಲ-ಮೂತ್ರ ವಿಸರ್ಜನೆ ಮಾಡದಿರುವದು.

ಈ ಎಲ್ಲಾ ವಿಧಾನಗಳನ್ನು ಸರಿಯಾಗಿ ಪಾಲಿಸಿದಲ್ಲಿ ಮುಂದೆ ಬಂದೊದಗಬಹುದಾದ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕ ಡಾ. ಶಿವರಾಜ್ ಬಿ.ಎಂ. ತಿಳಿಸಿದ್ದಾರೆ.