ಮಡಿಕೇರಿ, ಆ. 29: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಜನರು ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ. ಆ ದಿಸೆಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಪರಿಹಾರ ಕೇಂದ್ರದಲ್ಲಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ಪರಿಹಾರ ಕೇಂದ್ರಗಳಲ್ಲಿ ಬೆಳಗಿನ ಉಪಹಾರ ಕಾಫಿ, ಟೀ, ಮಧ್ಯಾಹ್ನದ ಊಟ, ಸಂಜೆಯ ಕಾಫಿ-ಟೀ ಮತ್ತು ಸ್ನಾಕ್ಸ್ ಹಾಗೆಯೇ ರಾತ್ರಿಯ ಊಟವನ್ನು ಕಲ್ಪಿಸಲಾಗುತ್ತಿದೆ. ಪರಿಹಾರ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಊಟೋಪಚಾರ ಕಲ್ಪಿಸುವದರ ಜೊತೆಗೆ ಆರೋಗ್ಯವನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಪರಿಹಾರ ಕೇಂದ್ರಕ್ಕೆ ಇಬ್ಬರು ವೈದ್ಯರು ಹಾಗೂ ಶುಶ್ರೂಷಕರನ್ನು ನಿಯೋಜಿಸಲಾಗಿದೆ. ಹಾಗೆಯೇ ಎಲ್ಲಾ ರೀತಿಯ ಔಷಧಿಯನ್ನು ದಾಸ್ತಾನು, ಸಾಂಕ್ರಾಮಿಕ ರೋಗ ತಡೆಯುವದು ಮತ್ತು ಅಸಾಂಕ್ರಾಮಿಕ ರೋಗ ಪತ್ತೆಹಚ್ಚಿ ಚಿಕಿತ್ಸೆ ನೀಡಲು 4 ತಂಡಗಳನ್ನು ರಚಿಸಲಾಗಿದೆ.

ಮಡಿಕೇರಿ ತಾಲ್ಲೂಕಿಗೆ 2, ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ 1 ಮತ್ತು ವೀರಾಜಪೇಟೆಯಲ್ಲಿ 1 ತಂಡವನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ, ಹಿರಿಯ ಆರೋಗ್ಯ ಸಹಾಯಕರು, 4 ಮಂದಿ ಕಿರಿಯ ಆರೋಗ್ಯ ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ.

ಪ್ರವಾಹ ಪೀಡಿತ ಹಾಗೂ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಚಿಕಿತ್ಸೆಯನ್ನು ನೀಡುತ್ತಾರೆ. ತೆರೆದ ಬಾವಿ ಪರಿಶೀಲನೆ, ಕುಡಿಯುವ ನೀರು ಪರೀಕ್ಷೆ, ಆರೋಗ್ಯ ಶಿಕ್ಷಣ ನೀಡುವದು, ಪರಿಸರ ಶುಚಿತ್ವ ಬಗ್ಗೆ ಮಾಹಿತಿ ನೀಡುವದು, ಗ್ರಾ.ಪಂ., ಮತ್ತು ಪ.ಪಂ.ಗಳಿಗೆ ಭೇಟಿ ನೀಡಿ ಶುಚಿತ್ವದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಓವರ್‍ಹೆಡ್ ಟ್ಯಾಂಕ್ ಶುಚಿಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವದು, ಮನೆ-ಮನೆಗೆ ಭೇಟಿ ಸಂದರ್ಭ ಜ್ವರ, ವಾಂತಿ-ಬೇಧಿ ಮತ್ತಿತ್ತರ ಬಗ್ಗೆ ಮಾಹಿತಿ ಪಡೆದು ಆರೋಗ್ಯ ಸೇವೆ ಒದಗಿಸುವದು. ಸಂತ್ರಸ್ತರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆದು ಪ್ರಕೃತಿ ವಿಕೋಪಕ್ಕೆ ತುತ್ತಾದವರಿಗೆ ಆರೋಗ್ಯ ಸೇವೆ ಒದಗಿಸುವದು. ಹೀಗೆ ಹಲವು ಪ್ರಯತ್ನಗಳು ನಡೆದಿವೆ ಎಂದು ರಾಷ್ಟ್ರೀಯ ರೋಗವಾಹಕ ನಿಯಂತ್ರಣ ಕಾರ್ಯಕ್ರಮದ ಉಪನಿರ್ದೇಶಕ ಡಾ. ಬಿ.ಜಿ. ಪ್ರಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಪರಿಹಾರ ಕೇಂದ್ರಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ವೈದ್ಯರು, ಶುಶ್ರೂಷಕರು ಆಗಮಿಸಿದ್ದು, ಆರೋಗ್ಯ ಸೇವೆ ಒದಗಿಸುವ ಜೊತೆಗೆ ಶುಚಿತ್ವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.