ಸಿದ್ದಾಪುರ, ಆ. 27: ಈ ಬಾರಿಯ ಮಹಾಮಳೆಗೆ ಪ್ರವಾಹದ ನೀರು ಕರಡಿಗೋಡು ಗ್ರಾಮದ ನದಿದಡದ ನಿವಾಸಿಗಳ ಕಣ್ಣೀರು ಸುರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರವಾಹದ ನೀರಿನಿಂದಾಗಿ ಭಯಭೀತರಾದ ಕರಡಿಗೋಡಿನ ನೂರಾರು ನಿವಾಸಿಗಳು ಕೊನೆಗೂ ನದಿ ದಡವನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳುವದಾಗಿ ಒಮ್ಮತದಿಂದ ಪಂಚಾಯಿತಿಗೆ ಮನವಿಪತ್ರ ನೀಡಿ ತಮಗೆ ಶಾಶ್ವತ ಸೂರು ಒದಗಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕರಡಿಗೋಡು ಗ್ರಾಮದ ನದಿ ದಡದಲ್ಲಿ ಕಳೆದ ಸುಮಾರು ವರ್ಷಗಳಿಂದ ನೆಲೆಸಿಕೊಂಡಿರುವ ನಿವಾಸಿಗಳು ಪ್ರವಾಹದ ಸಂದರ್ಭದಲ್ಲಿ ಕೆಲವು ದಿನಗಳವರೆಗೆ ಕೆಲವು ಕುಟುಂಬಗಳು ಪರಿಹಾರ ಕೇಂದ್ರದಲ್ಲಿ ಆಶ್ರಯಪಡೆಯುತ್ತಿದ್ದರು. ಇನ್ನು ಕೆಲವು ಕುಟುಂಬದವರು ಪೊಲೀಸರು ಕಂದಾಯ ಇಲಾಖಾಧಿಕಾರಿಗಳೊಂದಿಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರೂ ಮನೆ ಬಿಟ್ಟು ಕದಲುತ್ತಿತರಲಿಲ್ಲ. ಅಲ್ಲದೆ ಹಠಮಾರಿತನದಿಂದ ವರ್ತಿಸಿದ ಘಟನೆಗಳು ನಡೆದಿತ್ತು. ಆದರೆ ಈ ಬಾರಿ ನಾಲ್ಕು ಬಾರಿ ಕಾವೇರಿ ನದಿಯಲ್ಲಿ ಪ್ರವಾಹದ ನೀರು ಏರಿಕೆಯಾಗಿತ್ತು. ಈ ಸಂದರ್ಭದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಇಲಾಖಾಧಿಕಾರಿಗಳು ಕರಡಿಗೋಡುವಿನ ನದಿದಡಕ್ಕೆ ತೆರಳಿ 126 ಮನೆಗಳ ಕುಟುಂಬಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಿದರು. ಆದರೆ ನೀರಿನ ಪ್ರಮಾಣವು ಅಷ್ಟೊಂದು ಮಟ್ಟದಲ್ಲಿ ಇರದ ಹಿನ್ನೆಲೆಯಲ್ಲಿ ಯಾರೂ ಕೂಡ ಎಲ್ಲಿಗೂ ತೆರಳಲಿಲ್ಲ. ಆದರೆ ಇತ್ತೀಚೆಗೆ ಸುರಿದ ಮಹಾಮಳೆಯು ಜಿಲ್ಲಾದ್ಯಂತ ಭಯದ ವಾತಾವರಣ ಮೂಡಿಸಿ ಹಲವರ ಪಾಲಿಗೆ ವರುಣ ಮರಣ ಮೃದಂಗವಾಗಿ ಭೂಮಿಗಳು ಕೂಡ ನೆಲಸಮವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು.

ಮಹಾಮಳೆಯು ಈ ಬಾರಿ ಕರಡಿಗೋಡು ವ್ಯಾಪ್ತಿಯಲ್ಲಿ ಅಪಾಯವನ್ನು ತಂದಿತ್ತು ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ಕರಡಿಗೋಡು ಗುಹ್ಯ ಗ್ರಾಮದಲ್ಲಿ ನೂರಾರು ಮನೆಗಳು ಜಲಾವೃತಗೊಂಡವು. ಕರಡಿಗೋಡು ಗ್ರಾಮದ ನದಿ ದಡದಲ್ಲಿ 20ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ಕುಸಿದು ಹಾನಿಯಾಯಿತು. ನದಿದಡದ ಎಲ್ಲಾ ಮನೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಶಿಥಿಲಗೊಂಡು ಬಿರುಕು ಬಿಟ್ಟಿವೆ. ಅಲ್ಲಿಯ ಮಂದಿ ಜೀವ ಕೈಯಲ್ಲಿ ಹಿಡಿದುಕೊಂಡೇ ಮನೆಯಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಬಹುತೇಕ ಮನೆಗಳ ಹಿಂಬದಿಯು ಕುಸಿದಿದ್ದು, ಹಲವಾರು ಮಂದಿಯ ಶೌಚಾಲಯಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಈ ಹಿಂದೆ ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದರೂ ನದಿ ದಡವನ್ನು ಬಿಟ್ಟು ಹೋಗುವದಿಲ್ಲವೆಂದು ಹಠ ಹಿಡಿದು ಕುಳಿತ ಮಂದಿ ಇದೀಗ ತಮ್ಮ ಹಠಮಾರಿತನದಿಂದ ಹಿಂದೆ ಸರಿದಿದ್ದು, ಮುಂದೆ ತಮಗೆ ಸುರಕ್ಷಿತ ಸ್ಥಳ ನೀಡಿದರೆ ತಾವು ನದಿದಡವನ್ನು ತೊರೆದು ಹೋಗುತ್ತೇವೆಂದು ನೂರಾರು ಕುಟುಂಬಗಳು ಸಿದ್ದಾಪುರ ಪಂಚಾಯಿತಿ ಕಚೇರಿಗೆ ಆಗಮಿಸಿ ಪರಸ್ಪರ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ನದಿದಡ ಸುರಕ್ಷಿತವಲ್ಲ ಎಂದು ತಡವಾಗಿ ಮನವರಿಕೆ ಆಗಿರುವ ಕುಟುಂಬಗಳು ತಮ್ಮ ಮಕ್ಕಳು ತಾವು ಅನುಭವಿಸಿದ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುವದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಪಂಚಾಯಿತಿಯ ಆಡಳಿತ ಮಂಡಳಿ ಬಳಿ ಚರ್ಚಿಸಿದ್ದಾರೆ. ಅಲ್ಲದೆ, ಮನವಿ ಪತ್ರವನ್ನು ಕೂಡ ನೀಡಿ ತಾವುಗಳು ಸ್ಥಳಾಂತರಗೊಳ್ಳಲು ಸಿದ್ಧರಿದ್ದೇವೆ ಎಂದು ಲಿಖಿತ ರೂಪದಲ್ಲಿ ಗ್ರಾ.ಪಂ. ಅಧ್ಯಕ್ಷ ಮಣಿಗೆ ಮನವಿಪತ್ರ ನೀಡಿದ್ದಾರೆ. ಈಗಾಗಲೇ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು ನೇತೃತ್ವದಲ್ಲಿ ಕಂದಾಯ ಇಲಾಖಾಧಿಕಾರಿ ಕರಡಿಗೋಡಿನ ನದಿದಡದ ನಿವಾಸಿಗಳ ಸ್ಥಳಾಂತರಕ್ಕೆ ಜಾಗವನ್ನು ಗುರುತಿಸಲು ಶ್ರಮವಹಿಸುತ್ತಿದ್ದಾರೆ. ಒಟ್ಟಿನಲ್ಲಿ ತಡವಾಗಿಯಾದರೂ ನದಿದಡದವರಿಗೆ ಬುದ್ಧಿ ಬಂತಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

-ವಾಸು.