ಮಡಿಕೇರಿ, ಆ. 27: ತಾ. 16 ರಂದು ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಮಡಿಕೇರಿ ಮುತ್ತಪ್ಪ ದೇವಾಲಯದಿಂದ ಕಾನ್ವೆಂಟ್ ಶಾಲೆಗೆ ತೆರಳುವ ರಸ್ತೆ ಬದಿ ತಾರಸಿ ಮನೆಯೊಂದು ತಳಪಾಯ ಸಹಿತ ಕುಸಿದು ಪ್ರಪಾತಕ್ಕೆ ಜಾರಿ ಹೋಗಿತ್ತು . ಸಮೀಪದ ಮತ್ತೊಂದು ಮನೆ ಭಾಗಶಃ ಕುಸಿದು ನಿಂತಿದ್ದು, ಅದರ ಒತ್ತಿನಲ್ಲೇ ಇದ್ದ ಪಾಂಡಿರ ಕಾಂತಿ ಸುಬ್ರಮಣಿ ಅವರ ಮನೆ ಕೂಡ ಬಿರುಕು ಬಿಟ್ಟಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಕಾಂತಿ ಅವರು ಮನೆ ಖಾಲಿ ಮಾಡಲು ಮುಂದಾದಾಗ ಅನೇಕರು ವಸ್ತುಗಳನ್ನು ಹೊರ ತೆಗೆಯಲು ನೆರವಾಗಿದ್ದರಾದರೂ ಈ ಸಂದರ್ಭ ಮನೆಯಲ್ಲಿದ್ದ ಮೂರುವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿತ್ತು. ಸ್ವಂತ ಮನೆಯಲ್ಲಿ ಇರಲಾಗದ ಪರಿಸ್ಥಿತಿಗೆ ಒಳಗಾದ ಕಾಂತಿ ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಪುತ್ರ ಸಜನ್ ಪೂಣಚ್ಚನ ವಿವಾಹ ಸಮಾರಂಭ ಗೊತ್ತುಪಡಿಸಲಾಗಿದ್ದು, ಇಂತಹ ಸಂದರ್ಭದಲ್ಲೇ ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳೆದುಕೊಂಡು ಕಾಂತಿ ಅವರು ಕಂಗಾಲಾಗಿದ್ದಾರೆ. ಆಭರಣ ಕಾಣೆಯಾದ ಬಗ್ಗೆ ಅವರು ಮಡಿಕೇರಿ ನಗರ ಠಾಣೆಗೆ ಪುಕಾರು ನೀಡಿದ್ದಾರೆಂದು ಗೊತ್ತಾಗಿದೆ.