ಮಡಿಕೇರಿ, ಆ. 26: ಸರಕಾರದೊಂದಿಗೆ ವಿಧಾನಪರಿಷತ್‍ನಲ್ಲಿ ಅಧಿಕಾರಿಗಳೊಂದಿಗೆ ನಮ್ಮ ಕೊಡಗು, ನಮ್ಮ ಕೊಡಗು ಎನ್ನುತ್ತಿದೆ. ಇದೀಗ ಯಾವ ಬಾಯಲ್ಲಿ ಈ ಮಾತನ್ನು ಧೈರ್ಯದಿಂದ ಹೇಳಲಿ. ನಿನ್ನೆ, ಮೊನ್ನೆ ಖಾಸಗಿ ವಾಹಿನಿಯೊಂದರಲ್ಲಿ ಕೊಡಗಿನ ಮಹಿಳೆಯರು ಸಮಾರಂಭವೊಂದರಲ್ಲಿ ತಮ್ಮಷ್ಟಕ್ಕೆ ಸಂಭ್ರಮಿಸುತ್ತಿದ್ದ ದೃಶ್ಯವೊಂದನ್ನು ಬಿತ್ತರಿಸಲಾಗಿತ್ತು. ಹೌದು ಇಲ್ಲಿನ ಜನರು ತಮ್ಮತನದಿಂದಲೇ ಬದುಕು ಕಟ್ಟಿಕೊಂಡು ಜೀವಿಸುತ್ತಿದ್ದರು. ಇನ್ನು ಮುಂದೆ ಈ ರೀತಿಯ ಸಂಭ್ರಮವೆಲ್ಲಿ..?ಶ್ರಮಜೀವಿಗಳಾಗಿ ಬದುಕು ಕಟ್ಟಿಕೊಂಡು ತಮ್ಮ ಪಾಡಿಗೆ ನೆಮ್ಮದಿಯಿಂದ ಇದ್ದ ಜನರು ಪರಿಹಾರ ಕೇಂದ್ರಗಳಲ್ಲಿ ಅತಂತ್ರತೆಯಿಂದ ಹೊರ ಬರಲಾಗದ ನೋವಿನೊಂದಿಗೆ ಪರಿತಪಿಸುತ್ತಿರುವಂತಾಗಿರುವದು ಕರಳು ಹಿಂಡುತ್ತದೆ. ‘‘ ಆ ದೇವರು ಎಲ್ಲವನ್ನೂ ನೀಡಿ ಕಸಿದುಕೊಂಡು ಬಿಟ್ಟ’’ ಇದು ವಿಧಾನಪರಿಷತ್ ಸದಸ್ಯೆಯಾಗಿರುವ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಮನಕಲಕುವಂತಹ ಈ ಬಾರಿಯ ಪ್ರಕೃತಿ ವಿಕೋಪದ ಕುರಿತಾದ ಅನುಭವದ ನುಡಿ.

ಪ್ರಕೃತಿಯ ಗದಾಪ್ರಹಾರಕ್ಕೆ ಒಳಗಾದ ಗ್ರಾಮಗಳಲ್ಲಿ ಒಂದಾದ ಮುಕ್ಕೋಡ್ಲು ಗ್ರಾಮಕ್ಕೆ ಸೇರಿದವರು ವೀಣಾ ಅಚ್ಚಯ್ಯ. ಈ ಬಾರಿ ಘಟಿಸಿಹೋದ ದುರಂತಮಯ ಪರಿಸ್ಥಿತಿಯನ್ನು ಕಣ್ಣಾರೆ ವೀಕ್ಷಿಸಿ ಈ ದುರಂತದ ನಡುವೆ ತಮ್ಮ ಮನೆ ಮಂದಿ ಕೂಡ ಸಿಲುಕಿದ್ದು, ಈ ವಿಭಾಗದಲ್ಲಿನ ಬಹುತೇಕ ಜನರೆಲ್ಲರೂ ಅನುಭವಿಸಿದ ಪರಿಸ್ಥಿತಿಯನ್ನು ನೆನೆದು ಗದ್ಗರಿತರಾದ ಅವರು ದುರಂತದ ಬಗ್ಗೆ ಪ್ರತಿಕ್ರಿಯಿಸಿದರು. ‘ಶಕ್ತಿ’ ಕಾರ್ಯಾಲಯ ಕೂಡ ಈ ಭಾರಿ ಜಲಪ್ರಳಯದ ಸಮಸ್ಯೆಗೆ ಒಳಗಾಗಿದ್ದ ಕುರಿತು ಸಾಂತ್ವನದೊಂದಿಗೆ ಧೈರ್ಯ ತುಂಬಲು ಕಚೇರಿಗೆ ಇಂದು ಭೇಟಿ ನೀಡಿದ್ದ ಅವರನ್ನು ಪತ್ರಿಕೆ ಮಾತನಾಡಿಸಿದ ಸಂದರ್ಭ ತಮ್ಮ ಅಂತರಾಳವನ್ನು ಬಿಚ್ಚಿಟ್ಟರು.

ಪ್ರಕೃತಿಯ ಹೊಡೆತಕ್ಕೆ ಸಿಲುಕಿದ ಭಾಗದ ಜನರೆಲ್ಲರೂ ಶ್ರಮಜೀವಿಗಳು ತಮ್ಮ ದುಡಿಮೆಯ ಸಂದರ್ಭ ಬಾವಿ, ಬೋರ್‍ವೆಲ್ ನೀರು ಅವಲಂಬಿಸದೆ, ‘ಗ್ರ್ಯಾವಿಟ್ ವಾಟರ್’ ಕುಡಿದು ಬದುಕಿದವರು. ತಾವು ಕಾಫಿ ಬೆಳೆಯುತ್ತಿದ್ದ ಪ್ರದೇಶದಿಂದ ಏಲಕ್ಕಿ ಬೆಳೆ ಹೆಚ್ಚಿದ್ದ ಪ್ರದೇಶಕ್ಕೆ ವಿವಾಹವಾದವರು ತಮ್ಮ ಕುಟುಂಬ ಸೇರಿದಂತೆ ನಂತರದ ದಿನಗಳಲ್ಲಿ ಇಲ್ಲಿಯೂ ಪರಿಶ್ರಮದಿಂದ ಜನರು ಕಾಫಿ ಬೆಳೆಯಲು ಪ್ರಯತ್ನಿಸಿದ್ದನ್ನು ಗಮನಿಸಿದ್ದೇನೆ. ಮಕ್ಕಳು ಶಾಲೆಗೆ

(ಮೊದಲ ಪುಟದಿಂದ) ತೆರಳಲಾಗದ ಪರಿಸ್ಥಿತಿ ಈ ವಿಭಾಗಕ್ಕೆ. ಮದುವೆಗೆ ವಧು ನೀಡದಂತಹ ಸನ್ನಿವೇಶವೂ ಆಗ ಇತ್ತು. ಕಾಲಾನುಕ್ರಮದಲ್ಲಿ ಪರಿಶ್ರಮದ ಕೆಲಸದ ಮೂಲಕ ಇದು ಒಂದಷ್ಟು ತಿಳಿಯಾಗಿತ್ತು. ಹಲವು ಉತ್ತಮ ಚಟುವಟಿಕೆಗಳ ಮೂಲಕ ಯುವಕರು ಹೊರ ಹೋಗುವ ಬದಲು ಇಲ್ಲಿಯೇ ಬದುಕು ಕಾಣಲು ಮುಂದಾಗಿದ್ದರು. ಒಂದು ರೀತಿಯಲ್ಲಿ ಸಂಕಷ್ಟದ ಬದುಕಿನಿಂದ ಹೊರ ಬರುತ್ತಿದ್ದ ಸಂದರ್ಭದಲ್ಲಿ ಇಂತಹ ದುರಂತ ನಡೆದು ಹೋಗಿದ್ದು, ಎಲ್ಲರ ಬದುಕು ಛಿದ್ರ ಛಿದ್ರವಾದಂತಾಗಿದೆ ಎಂದು ವೀಣಾ ನೋವು ವ್ಯಕ್ತಪಡಿಸಿದರು.

ಪತಿ ಅಚ್ಚಯ್ಯ ಕೂಡ ದುರಂತದಲ್ಲಿ ಸಿಲುಕಿದ್ದರು. ಪ್ರೀತಿಯಿಂದ ಸಾಕಿದ ಜಾನುವಾರುಗಳು ಕಷ್ಟಪಟ್ಟು ಮಾಡಿದ್ದ ತೋಟಕ್ಕೆ ಹಾನಿಯಾಗಿದೆ. ತಮ್ಮ ಕುಟುಂಬದ ಪಾಡು ಮಾತ್ರ ಇದಲ್ಲ. ಅದೆಷ್ಟೋ ಜನರು ಸಿಲುಕಿ ಹಾಕಿಕೊಂಡು ಪ್ರಯಾಸದಿಂದ ಹೊರ ಪ್ರಪಂಚಕ್ಕೆ ದಾಟಿ ಬಂದಿದ್ದು, ಬದುಕುಳಿದಿದ್ದೇ ಹೆಚ್ಚು. ಕಣ್ಣೀರು ಇಡದವರೇ ಇಲ್ಲ. ಇವೆಲ್ಲವೂ ತಮ್ಮ ಕಣ್ಣು ಮುಂದೆಯೇ ನಡೆದು ಹೋಗಿರುವದನ್ನು ಅರಗಿಸಿಕೊಳ್ಳಲು ಕಷ್ಟ ಎಂದು ಸ್ಮರಿಸಿದ ಅವರು ರಾಜಕಾರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್ ಅವರ ಪರಿಶ್ರಮವನ್ನೂ ಉಲ್ಲೇಖಿಸಿದರು. ಯಾವದೇ ರಾಜಕಾರಣಿಯಾದರೂ ಜನರೊಂದಿಗಿರಬೇಕು ಎಂದ ಅವರು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ಕೂಡ ಎಲ್ಲಾ ರೀತಿಯಲ್ಲೂ ಸ್ಪಂದನ ನೀಡಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿ ವರ್ಗದವರು, ಸಿಬ್ಬಂದಿಗಳು ಅಪಾರ ಶ್ರಮಪಟ್ಟಿದ್ದಾರೆ. ಇವರೊಂದಿಗೆ ಸ್ಥಳೀಯ ಜನರು, ಸಂಘ - ಸಂಸ್ಥೆಗಳು ತೋರಿದ ಸಾಹಸ, ಪಟ್ಟ ಪರಿಶ್ರಮವನ್ನೂ ಸ್ಮರಿಸಲೇಬೇಕು ಎಂದರು.

ಎಲ್ಲವೂ ಸರಿಯಿದ್ದಾಗ ಮರಳಿಗಾಗಿ, ಕಲ್ಲಿಗಾಗಿ ಜಗಳಗಳೂ ನಡೆದಿದ್ದವು. ಆದರೆ ಈಗ ಮನೆಗಳ ಮುಂದೆಯೇ ಇವೆಲ್ಲವೂ ಹರಡಿ ಹೋಗಿವೆ. ಎಂದು ವಿಷಾದಿಸಿದರು. ಆರಂಭದ ದಿನದಿಂದ ಈ ತನಕವೂ ಸಾಧ್ಯವಾದಷ್ಟು ಪ್ರಯತ್ನ ನಡೆಸಲಾಗಿದೆ. ಗಂಭೀರತೆಯ ನಡುವೆ ಒಮ್ಮೊಮ್ಮೆ ಖಾರವಾಗಿ ಪ್ರತಿಕ್ರಿಯಿಸುವಂತಾಗಿತ್ತು. ಈಗಿನ ದುರಂತ ಭೀಕರವಾದ ಹಾಗೂ ಗಂಭೀರವಾದ ಅನುಭವವಾಗಿದೆ. ಶ್ರಮಜೀವಿಗಳನ್ನು ಪರಿಹಾರ ಕೇಂದ್ರದಲ್ಲಿ ನೋಡುವಾಗ ದುಃಖ ಉಮ್ಮಳಿಸಿ ಬರುತ್ತದೆ. ಸರಕಾರಗಳು ಕೊಡಗಿಗೆ ವಿಶೇಷ ಮಾನ್ಯತೆ ನೀಡಲೇಬೇಕಾಗಿದೆ. ಕೊಡಗಿಗೆ ಈ ದುರಂತ ಬರಬಾರದಿತ್ತು ಎಂದು ವೀಣಾ ಅಚ್ಚಯ್ಯ ನುಡಿದಾಗ ಅವರ ಕಣ್ಣಲ್ಲಿ ನೀರಾಡುತ್ತಿತ್ತು.