ವೀರಾಜಪೇಟೆ, ಆ. 26 : ಭಾರೀ ಮಳೆಯಿಂದ ಮೂರು ತಿಂಗಳ ಹಿಂದೆ ಹಾನಿಗೊಳಗಾದ ವೀರಾಜಪೇಟೆ ಮಾಕುಟ್ಟ ಕೇರಳ ರಸ್ತೆ ದುರಸ್ತಿಗೆ ಇನ್ನು ಆರು ತಿಂಗಳ ಅವಧಿಗೂ ಹೆಚ್ಚು ಕಾಲ ತಗುಲಲಿರುವದರಿಂದ ಈ ರಸ್ತೆಯಲ್ಲಿ ಬಸ್ಸು ಹಾಗೂ ಲಾರಿಗಳಂತಹ ಸರಕು ತುಂಬಿದ ಭಾರೀ ವಾಹನಗಳ ಸಂಚಾರ ಇನ್ನು ವಿಳಂಬವಾಗಲಿದ್ದು, ವ್ಯಾಪಾರಿಗಳಲ್ಲಿ ಆತಂಕ ಮೂಡಿಸಿದೆ.ಈಗಾಗಲೇ ರಸ್ತೆಯನ್ನು ತಾತ್ಕಲಿವಾಗಿ ದುರಸ್ತಿಪಡಿಸಿ ಇಪ್ಪತ್ತು ದಿನಗಳ ಹಿಂದೆ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದ್ದರೂ ಕೇರಳದ ಗಡಿಭಾಗದಲ್ಲಿರುವ ತಲಚೇರಿ, ಮಟ್ಟನೂರು, ಇರಿಟ್ಟಿ ಹಾಗೂ ಕೂಟುಪೊಳೆ, ಮಾಕುಟ್ಟದ ನಿವಾಸಿಗಳಿಗೆ ಈ ಮಾರ್ಗದಲ್ಲಿ ಬಸ್ಸು ಹಾಗೂ ಲಾರಿ ಸಂಚಾರವಿಲ್ಲದೆ ಕೊಡಗಿನ ಸಂಪರ್ಕವನ್ನೇ ಕಳೆದುಕೊಂಡಂತಾಗಿದೆ. ಪೆರುಂಬಾಡಿ, ವಾಟೆಕೊಲ್ಲಿ, ಮಾಕುಟ್ಟದ ಮಾರ್ಗವಾಗಿ ನಿತ್ಯ ಇಪ್ಪತ್ತರಿಂದ ಮೂವತ್ತು ಲಾರಿಗಳು, ಮಿನಿ ಲಾರಿಗಳು ತರಕಾರಿ ಸಾಮಗ್ರಿಗಳನ್ನು ತುಂಬಿಕೊಂಡು ಕೇರಳ ರಾಜ್ಯದ ಆಯ್ದ ಸ್ಥಳಗಳಿಗೆ ತೆರಳುತ್ತಿದ್ದವು. ಈಗ ರಸ್ತೆ ಸಂಪರ್ಕ ಕಡಿತಗೊಂಡಿರುವದರಿಂದ ಎರಡು ರಾಜ್ಯಗಳಲ್ಲಿಯೂ ಈ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ.

ಇತ್ತೀಚೆಗೆ ಸೂರತ್ಕಲ್‍ನ ಎನ್‍ಇಐಟಿ ಕಾಲೇಜಿನ ತಜ್ಞರು ಮಾಕುಟ್ಟದ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆಗೆ ರಾಜ್ಯ ಹೆದ್ದಾರಿ ರಸ್ತೆ ದುರಸ್ತಿಪಡಿಸುವ ಕುರಿತು ಸಲಹೆ ನೀಡಿದ್ದರು. ಹೆದ್ದಾರಿ ದುರಸ್ತಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲು ಸಧ್ಯದಲ್ಲಿಯೇ ನೀಲಿ ನಕಾಶೆಯನ್ನು ಇಲಾಖೆಗೆ ಕಳುಹಿಸಲಿದ್ದು, ಅದರಂತೆ ರಸ್ತೆ ದುರಸ್ತಿಯಾಗಲಿದೆ. ಇದರಿಂದ ಮಾಕುಟ್ಟ ರಸ್ತೆಗೆ ಪರಿಹಾರ ಕಾಣಲಿದೆ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಾಕುಟ್ಟ ರಸ್ತೆಯ ಬದಿಯಲ್ಲಿ ಭೂ ಕುಸಿತ ಉಂಟಾದ ಹಿನ್ನಲೆಯಲ್ಲಿ ಮೈಸೂರಿನ ಗಣಿ ಮತ್ತು ಭೂ ವಿಜ್ಞಾನಿಗಳು ಮಣ್ಣನ್ನು ಪರೀಕ್ಷೆ ಮಾಡಿದಲ್ಲದೆ; ಪ್ರಯೋಗಾಲಯ ದಲ್ಲಿಯೂ

(ಮೊದಲ ಪುಟದಿಂದ) ಮಣ್ಣು ಪರೀಕ್ಷೆಗೆ ತೆಗೆದುಕೊಂಡಿದ್ದು, ಸದ್ಯದಲ್ಲಿಯೇ ವರದಿ ನೀಡಲಿದ್ದಾರೆ. ಮುಂದಿನ ತಿಂಗಳ ಮೂರನೇ ವಾರದಲ್ಲಿ ಕೇರಳದ ಮಟ್ಟನೂರು ಬಳಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಅಂತರಾಷ್ಟೀಯ ವಿಮಾನ ನಿಲ್ದಾಣದ ಪ್ರಾರಂಭಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ಆದರೆ ಕೇರಳ ಕೊಡಗು ಸಂಪರ್ಕ ರಸ್ತೆಯ ದುರಸ್ತಿಯ ವಿಳಂಬದಿಂದ ವಿಮಾನ ನಿಲ್ದಾಣದ ಆರಂಭಕ್ಕೂ ತೊಡಕುಂಟಾಗಿದೆ. ಕೊಡಗು ಕೇರಳ ಸಂಪರ್ಕ ರಸ್ತೆಯ ಅಡಚಣೆಯಿಂದ ಗಡಿ ಭಾಗದಲ್ಲಿರುವ ವ್ಯಾಪಾರಿಗಳು ಆತಂಕಗೊಳಗಾಗಿದ್ದಾರೆ.

ಎರಡು ದಿನಗಳ ಹಿಂದೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಮಾಕುಟ್ಟಕ್ಕೆ ತೆರಳಿ ಹಾನಿಗೊಳಗಾದ ರಸ್ತೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಲಘು ವಾಹನಗಳು ಆತಂಕವಿಲ್ಲದೆ ಸಂಚರಿಸಬಹುದಾಗಿದೆ. ಭಾರೀ ವಾಹನಗಳ ಸಂಚಾರಕ್ಕೆ ಸೂಕ್ತ ರೀತಿಯಲ್ಲಿ ರಸ್ತೆ ದುರಸ್ತಿಯಾದರೆ ಮಾತ್ರ ಸಾಧ್ಯ ಎಂದು ತಿಳಿಸಿದ್ದಾರೆ. - ಡಿ.ಎಂ.ಆರ್.