ಮಡಿಕೇರಿ, ಆ. 26: ಸೇವಾ ಭಾರತಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಿಂದ ನೋಂದಾಯಿಸಲ್ಪಟ್ಟ ಸಂಸ್ಥೆ. ಸಂಘದ ಸ್ವಯಂಸೇವಕರು ದೇಶದ ಯಾವದೇ ಮೂಲೆಯಲ್ಲಿ ವಿಪತ್ತು, ಅವಘಡ ಸಂಭವಿಸಿದಾಗ ಮಾಹಿತಿ ಸಿಕ್ಕಿದ ತಕ್ಷಣ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವದು ಸ್ವಭಾವತಃ ಬಂದಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ದಿನಾಂಕ 16 ರಂದು ಸಂಭವಿಸಿದ ಭೂಕುಸಿತ,ನೆರೆಹಾವಳಿಯ ಮಾಹಿತಿ ಬೆಳಿಗ್ಗೆ ನಮ್ಮ ಕಾರ್ಯಕರ್ತರಿಗೆ ಸಿಕ್ಕಿದ ತಕ್ಷಣ ಸಂಘದ ಸ್ವಯಂಸೇವಕರು ಕಾರ್ಯಪ್ರವೃತ್ತರಾದೆವು. ಬೆಳಿಗ್ಗೆ 10 ಗಂಟೆ ಸಮಯದಲ್ಲಿ 2 ತಂಡಗಳನ್ನು ಮಾಡಿ ಒಂದು ತಂಡ ಮುಕ್ಕೋಡ್ಲು ಗ್ರಾಮಗಳಿಗೆ ತೆರಳಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆವು. ಮಕ್ಕಂದೂರಿನಿಂದ ಮುಂದಕ್ಕೆ ತಂತಿಪಾಲ ರಸ್ತೆಯಲ್ಲಿ ಭೂಮಿ ಕುಸಿತ, ನೆರೆಹಾವಳಿಯ ಮಧ್ಯೆಯು ನಮ್ಮ ಸ್ವಯಂ ಸೇವಕರು ತೋಟ,ಬೆಟ್ಟಗಳನ್ನು ಹತ್ತಿ ತಂತಿಪಾಲ ಕಡೆಗೆ ತೆರಳಿ ಹಲವರನ್ನು ರಕ್ಷಣೆ ಮಾಡಿದರು. ಅಲ್ಲಿಂದ ಬೇರೆ ಬೇರೆ ಕಡೆ ಸಂಭವಿಸಿದ ಭೂಕುಸಿತದ ಮಾಹಿತಿ ತಿಳಿದ ತಂಡ 3 ಗುಂಪುಗಳಲ್ಲಿ ತೆರಳಿದಾಗ ತಂತಿಪಾಲ ಸಮೀಪ ಪಾಶ್ರ್ವವಾಯು ಪೀಡಿತ ಉತ್ತಯ್ಯ ಅವರ ಕುಟುಂಬವನ್ನು ರಕ್ಷಿಸಲಾಯಿತು ಎಂದು ಮಾಹಿತಿ ನೀಡಿದರು.

ತಾ. 17 ರಂದು ಜಿಲ್ಲೆಯ ವಿವಿಧ ಕಡೆಗಳಿಂದ 300ಕ್ಕೂ ಅಧಿಕ ಸ್ವಯಂಸೇವಕರು ಸೇರಿ ಕಾಟಕೇರಿ ಕಡೆಗೆ ಒಂದು ತಂಡ, ಮುಕ್ಕೋಡ್ಲು ಕಡೆಗೆ ಇನ್ನೊಂದು ತಂಡ, ಹೆಬ್ಬಟ್ಟಗೇರಿ, ಕಾಲೂರು ಕಡೆಗೆ ಮತ್ತೆರಡು ತಂಡ ತೆರಳಿ ಜಿಲ್ಲಾಡಳಿತದ ಸಂಪರ್ಕದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆವು.4 ದಿನಗಳ ಕಾರ್ಯಚರಣೆಯಲ್ಲಿ ಸುಮಾರು 1000ಕ್ಕೂ ಅಧಿಕ ನಿರಾಶ್ರಿತರನ್ನು ರಕ್ಷಣೆ ಮಾಡಲಾಯಿತು.ಮುಕ್ಕೋಡ್ಲುವಿನಿಂದ ಕೆಲವರನ್ನು 8-10 ಕಿ.ಮೀ ದೂರದ ರಸ್ತೆವರೆಗೆ ನಮ್ಮ ತಂಡದ ಸದಸ್ಯರು ಎತ್ತಿಕೊಂಡು ರಕ್ಷಣೆ ಮಾಡಿದ್ದಾರೆ.ತಂತಿಪಾಲದಲ್ಲಿ ಹಗ್ಗದ ಸಹಾಯದಿಂದ ಅರ್ಧ ಕಿ.ಮೀ ತೆರಳಿ ಗರ್ಭಿಣಿ ಮಹಿಳೆಯ ರಕ್ಷಣೆ ಮಾಡಲಾಯಿತು. ಮುಕ್ಕೋಡ್ಲು ಅವಂಡಿಯಲ್ಲಿ ಹೊಟ್ಟೆಯಂಡ ತಿಮ್ಮಯ್ಯ, ಗಪ್ಪು ಉತ್ತಯ್ಯ ಅವರ ಕುಟುಂಬದ 12 ಸದಸ್ಯರು ಸೇರಿದಂತೆ ಕೋಟೆ ಅಬ್ಬಿಯಲ್ಲಿ ಸೇರಿದ್ದ ಸುಮಾರು 70 ಮಂದಿಯನ್ನು ತಂಡ ರಕ್ಷಣೆ ಮಾಡಿತು ಎಂದು ವಿವರಿಸಿದರು.

ವಸತಿ ಊಟದ ವ್ಯವಸ್ಥೆ : ಭೂಕುಸಿತ, ನೆರೆ ಹಾವಳಿಯಿಂದ ರಕ್ಷಣೆ ಮಾಡಿಕೊಂಡು ಬಂದಂತಹ ನಿರಾಶ್ರಿತರಿಗೆ ವಸತಿ ಊಟದ ವ್ಯವಸ್ಥೆ ಮಾಡುವ ಸಲುವಾಗಿ ಆರ್.ಎಸ್ ಎಸ್ ಸಂಚಾಲಿತ ಸೇವಾ ಭಾರತಿ ತಂಡ ಮಡಿಕೇರಿ ನಗರದಲ್ಲಿ ಕಾರ್ಯಪ್ರವೃತವಾಯಿತು. ಇದೇ ತಂಡದ ಸದಸ್ಯರು ನಗರದ ಚಾಮುಂಡೇಶ್ವರಿ ನಗರ ಇಂದಿರಾನಗರ, ಸ್ಟೋನ್‍ಹಿಲ್ ಪ್ರದೇಶದಲ್ಲಿ ಭೂಕುಸಿತದಿಂದಾದ ನಿರಾಶ್ರಿತರನ್ನು ಕರೆತಂದು ನಗರ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಲಾಯಿತು.

ನಮ್ಮ ಈ ಕೇಂದ್ರದಲ್ಲಿ 183 ಕುಟುಂಬದ 560 ಮಂದಿ ನಿರಾಶ್ರಿತರಾಗಿ ತಂಗಿದ್ದಾರೆ,ನಮ್ಮ ನಿರಾಶ್ರಿತ ಕೇಂದ್ರದಲ್ಲಿ ನಿರಾಶ್ರಿತರ ಸಂಖ್ಯೆ ಹೆಚಾಗುತ್ತಿದಂತೆ ಕೊಡವ ಸಮಾಜ, ಗೆಜ್ಜೆ ಸಂಗಪ್ಪ, ಶ್ರೀ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ಶಿಬಿರವನ್ನು ಆರಂಭಿಸಲಾಯಿತು. ಜೊತೆಗೆ ಸೇವಾ ಭಾರತಿಯ ಸ್ವಯಂಸೇವಕರು ಜಿಲ್ಲೆಯ ಮೇಕೇರಿ, ಚೇರಂಬಾಣೆ, ಸಂಪಾಜೆ, ಮಾದಾಪುರ, ಸುಂಟಿಕೊಪ್ಪ ಸೋಮವಾರಪೇಟೆ ಗೌಡಸಮಾಜದಲ್ಲಿ ನಿರಾಶ್ರಿತ ಶಿಬಿರವನ್ನು ಆರಂಭಿಸಿದರು.

ನಿರಾಶ್ರಿತರ ಶಿಬಿರ ನಡೆಸಲು ಜಿಲ್ಲೆಯ ಜನತೆ, ಸಂಘಸಂಸ್ಥೆಗಳು ಸೇರಿದಂತೆ ಇಡೀ ರಾಜ್ಯದ ಜನತೆ ತುಂಬಾ ಸಹಕಾರ ನೀಡಿ ಅಗತ್ಯ ಸಾಮಗ್ರಿಗಳನ್ನು ಪೂರೈಸಿದ್ದಾರೆ. ತುರ್ತು ಸಂದರ್ಭದಲ್ಲಿ ನಮ್ಮೊಂದಿಗೆ ಸಹಕರಿಸಿದ ಜಿಲ್ಲೆಯ ರೋಟರಿ, ಲಯನ್ಸ್ ಸೇರಿದಂತೆ ಸಹಕಾರ ನೀಡಿದ ಜಿಲ್ಲೆಯ ಜನತೆ ಹಾಗೂ ನಿರಾಶ್ರಿತ ಶಿಬಿರ ನಡೆಸಲು ಅವಕಾಶ ಮಾಡಿಕೊಟ್ಟ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ, ಚೌಡೇಶ್ವರಿ ಸಭಾಂಗಣ, ಕೊಡವ ಸಮಾಜ ಮಡಿಕೇರಿ, ಜನರಲ್ ತಿಮ್ಮಯ್ಯ ಪಬ್ಲಿಕ್‍ಶಾಲೆ, ಗುರುಭವನ ಓಂಕಾರ್ ಸದನ, ಸೋಮವಾರಪೇಟೆಯ ಗೌಡಸಮಾಜ, ಸುಂಟಿಕೊಪ್ಪದ ಶ್ರೀ ರಾಮಮಂದಿರ ಸೇರಿದಂತೆ ವಿವಿದ ಶಾಲಾ ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳ ಸ್ಪಂದನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಎಲ್ಲಾ ಶಿಬಿರವನ್ನು ಜಿಲ್ಲಾಧಿಕಾರಿಯವರ ಆದೇಶದಂತೆ ತಾ. 28 ರಂದು ಜಿಲ್ಲಾಡಳಿತದ ಸುಪರ್ದಿಗೆ ನೀಡುವದರೊಂದಿಗೆ ಕರ್ನಾಟಕ ಸರ್ಕಾರ ನಿರಾಶ್ರಿತರ ಎಲ್ಲಾ ವ್ಯವಸ್ಥೆಯನ್ನು ಕೈಗೊಳ್ಳಲಿದೆ ಎಂದು ಸೇವಾ ಭಾರತಿ ಬಳಗದ ಕೆ.ಕೆ. ಮಹೇಶ್‍ಕುಮಾರ್, ಡಿ.ಕೆ. ಶಿವಾಜಿ, ಖಜಾಂಜಿ, ಚಂದ್ರ ಉಡೊತ್ತ್, ಕೆ.ಟಿ. ಉಲ್ಲಾಸ್, ಕೆ.ಹೆಚ್. ಚೇತನ್, ಪಳೆಯಂಡ ರಾಬಿನ್ ದೇವಯ್ಯ ತಿಳಿಸಿದರು.