ಶನಿವಾರಸಂತೆ, ಆ. 25: ಕೇರಳದ ಮಲಿಯಾಳಿ ಬಾಂಧವರಿಗೆ ತಿರು ಓಣಂ ಪವಿತ್ರವಾದ ಹಬ್ಬವಾಗಿದೆ. ತಿರು ಓಣಂ ಹಬ್ಬವನ್ನು ಮಲೆಯಾಳಿ ಬಾಂಧವರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇಂದು ತಿರು ಓಣಂ ಹಬ್ಬವಾಗಿತ್ತು, ಆದರೆ ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಪ್ರಕೃತಿವಿಕೋಪದಿಂದ ಜನರು ತತ್ತರಿಸಿ ಹೋಗಿರುವದರ ಜೊತೆಯಲ್ಲಿ ಜನರು ಪ್ರಾಣ, ಮನೆಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಹಿನ್ನೆಲೆಯಲ್ಲಿ ಮಲೆಯಾಳಿ ಬಾಂಧವರು ಹಬ್ಬವನ್ನು ಸರಳವಾಗಿ ಆಚರಿಸಿದರು.

ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ, ಕಣಿವೆಬಸವನಹಳ್ಳಿ, ಹೊಸಗುತ್ತಿ, ಮುಳ್ಳೂರು, ನಿಡ್ತ, ಗೋಪಾಲಪುರ, ಶನಿವಾರಸಂತೆ ಪಟ್ಟಣ, ದುಂಡಳ್ಳಿ ಮುಂತಾದ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಮೂಲದ ಮಲೆಯಾಳಿ ಬಾಂಧವರು ಅನೇಕ ವರ್ಷಗಳಿಂದ ನೆಲೆಸಿದ್ದಾರೆ. ಪ್ರತಿವರ್ಷ ಈ ವ್ಯಾಪ್ತಿಯ ಮಲೆಯಾಳಿ ಬಾಂಧವರು ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ, ಅಕ್ಕಪಕ್ಕದ ಮನೆಯವರನ್ನು ಕರೆದು ಸಾಮೂಹಿಕವಾಗಿ ಆಚರಿಸಿ ಸಂಭ್ರಮ ಪಡುತ್ತಿದ್ದರು. ಆದರೆ ಈ ವರ್ಷ ಕೊಡಗು ಮತ್ತು ಕೇರಳದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ತೀರ ಸರಳವಾಗಿ ಆಚರಿಸಿದರು. ಹಬ್ಬದ ಸಂಪ್ರದಾಯದಂತೆ ತಮ್ಮ ತಮ್ಮ ಮನೆಗಳಲ್ಲಿ ಓಣಂ ದೇವರಿಗೆ ಪೂಜೆ ಸಲ್ಲಿಸಿದ ತರುವಾಯ ಮನೆ ಅಂಗಳದಲ್ಲಿ ‘ಪೂಕಳಂ’ (ಹೂವಿನ ರಂಗೋಲಿ) ಬಿಡಿಸಿ ಹಬ್ಬವನ್ನು ಸರಳವಾಗಿ ಆಚರಿಸಿದರು.