ಕುಶಾಲನಗರ, ಆ. 25: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ನಾಗರಿಕರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕುಶಾಲನಗರದಲ್ಲಿ ನಡೆಯಿತು.

ಆದಿಚುಂಚನಗಿರಿ ಶ್ರೀ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ ತಜ್ಞರು, ನರರೋಗ, ಮಧುಮೇಹ, ಶಸ್ತ್ರಚಿಕಿತ್ಸೆ, ದಂತವೈದ್ಯರು, ಮಕ್ಕಳ ವೈದ್ಯರು, ಸ್ತ್ರೀರೋಗ ತಜ್ಞರು, ಕಣ್ಣಿನ ತಜ್ಞರು ಸೇರಿದಂತೆ 20 ಕ್ಕೂ ಅಧಿಕ ತಜ್ಞ ವೈದ್ಯರು ಮತ್ತು 100 ಕ್ಕೂ ಅಧಿಕ ಸಿಬ್ಬಂದಿಗಳು ರೋಗಿಗಳ ತಪಾಸಣೆ ಕೈಗೊಂಡರು. ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಎಂ.ಜಿ. ಶಿವರಾಂ, ಡಾ.ಟಿ.ಎಂ. ಮನೋಹರ್ ಉಸ್ತುವಾರಿಯಲ್ಲಿ ವಿವಿಧ ವಿಭಾಗಗಳಲ್ಲಿ ತಜ್ಞರು ಬೆಳಗಿನಿಂದ ಸಂಜೆ ತನಕ 600 ಕ್ಕೂ ಅಧಿಕ ಮಂದಿ ತಮ್ಮ ಆರೋಗ್ಯ ತಪಾಸಣೆ ಮಾಡಿದರು.

ನೆರೆ ಹಾವಳಿಯಲ್ಲಿ ಸಂತ್ರಸ್ತರಾದ ಬಡಾವಣೆಗಳಿಗೆ ತೆರಳಿ ಸ್ಥಳದಲ್ಲೇ ಆರೋಗ್ಯ ತಪಾಸಣೆಯೊಂದಿಗೆ ಚಿಕಿತ್ಸೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.

ಈ ಸಂದರ್ಭ ಆದಿಚುಂಚನಗಿರಿ ವಿವಿಧ ಶಾಖೆಗಳ ಮಠಾಧೀಶರಾದ ಸೋಮನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಿವಪುತ್ರ ಸ್ವಾಮೀಜಿ, ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಗೌಡ ಸಮಾಜದ ಅಧ್ಯಕ್ಷರಾದ ಕೆ.ಸಿ.ಪಿ. ಮೋಹನ್ ಮತ್ತಿತರರು ಇದ್ದರು.