ಮಡಿಕೇರಿ, ಆ. 25: ಜಿಲ್ಲೆಯ ಮೋದೂರು, ಹೇರೂರು, ಚೆಯ್ಯಂಡಾಣೆ, ಬೊಳ್ಳುಮಾಡು, ಶ್ರೀಮಂಗಲ, ಬೀರುಗ ಮುಂತಾದೆಡೆಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಫಿ ತೋಟಗಳ ನಡುವೆ ಸುಳಿದಾಡುತ್ತಿರುವ ಕಾಡಾನೆಗಳು ಇದೀಗ ಅಲ್ಲಲ್ಲಿ ಭತ್ತದ ಗದ್ದೆಗಳಲ್ಲಿ ನಾಟಿಗಳನ್ನು ತುಳಿದು ಹಾನಿ ಉಂಟುಮಾಡಿವೆ.
ಇಲ್ಲಿಗೆ ಸಮೀಪದ ಮೋದೂರು ತೋಟದ ಮಾಲೀಕ ನಕುಲ್ ಪೂಣಚ್ಚ ಹಾಗೂ ಬೊಳ್ಳುಮಾಡುವಿನ ಮಾತಂಡ ಬೆಳ್ಳಿಯಪ್ಪ ಅವರುಗಳು ಗ್ರಾಮಸ್ಥರ ಪರವಾಗಿ ‘ಶಕ್ತಿ’ಯೊಂದಿಗೆ ಹೇಳಿಕೆ ನೀಡಿ, ಪ್ರಕೃತಿ ವಿಕೋಪದ ನಡುವೆ ಕಾಡಾನೆಗಳಿಂದ ರೈತರಿಗೆ ಹಾನಿ ತಪ್ಪಿಸಲು ಅರಣ್ಯ ಇಲಾಖೆ ತುರ್ತು ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.
ಮನೆಯ ಸುತ್ತ ಮುತ್ತ ಸುಳಿದಾಡುವ ಕಾಡಾನೆಗಳಿಂದ ಹೊರಗೆ ತಿರುಗಾಡಲಾರದಷ್ಟು ಭಯದ ವಾತಾವರಣ ಎದುರಾಗಿದೆ ಎಂದು ಅವರುಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕುಟುಂಬ, ಮಕ್ಕಳು ಜೀವ ಭಯ ಎದುರಿಸುತ್ತಾರೆ ಎಂದಿದ್ದಾರೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಅವರ ಗಮನ ಸೆಳೆದಾಗ ‘ಶಕ್ತಿ’ಗೆ ಈ ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.
ನಾಲ್ಕು ಕಾಡಾನೆ ಸೆರೆಗೆ ಕ್ರಮ: ಈಗಾಗಲೇ ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುತ್ತಿರುವ ನಾಲ್ಕು ಒಂಟಿ ಸಲಗಗಳ ಸೆರೆಗೆ ಇಲಾಖೆಗೆ ಅನುಮತಿ ಲಭಿಸಿದೆ. ಮಳೆಯಿಂದಾಗಿ ಕಾರ್ಯಾಚರಣೆಗೂ ಅಡ್ಡಿಯಾಗಿದ್ದು, ಸಿಬ್ಬಂದಿಯ ಕೊರತೆ ನಡುವೆ ಹೊರ ಜಿಲ್ಲೆಯಿಂದ ಬಂದಿರುವ ಇಲಾಖಾ ಮಂದಿ ಜಿಗಣೆ, ಚಳಿ-ಮಳೆಯಿಂದ ತೋಟ, ಕಾಡುಗಳಲ್ಲಿ ಕಾರ್ಯಾ ಚರಣೆಗೆ ಹಿಂಜರಿಯುತ್ತಿದ್ದಾರೆ.
ಸ್ಥಳೀಯ ಅರಣ್ಯ ಉದ್ಯೋಗಿ ಗಳಷ್ಟೇ ಪರಿಸ್ಥಿತಿಯ ಒತ್ತಡ ನಡುವೆ ಕೆಲಸ ನಿರ್ವಹಿಸುತ್ತಾ, ಸಾಧ್ಯವಿರುವ ಮಟ್ಟಿಗೆ ಅಲ್ಲಲ್ಲಿ ದೂರುಗಳು ಬಂದೆಡೆಗೆ ತೆರಳಿ ಕಾರ್ಯಾಚರಣೆಯೊಂದಿಗೆ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ.
ಮಳೆ ಕಡಿಮೆಯಾದ ಬಳಿಕ ಪುಂಡಾನೆಗಳ ಸೆರೆಯೊಂದಿಗೆ, ತೋಟಗಳಲ್ಲಿ ಬೀಡು ಬಿಟ್ಟಿರುವ ಇತರ ಕಾಡಾನೆಗಳನ್ನು ಹಿಮ್ಮೆಟ್ಟಿಸಿ ಕಾಡಿಗಟ್ಟಲು ವ್ಯಾಪಕ ಕಾರ್ಯಾಚರಣೆ ಕೈಗೊಳ್ಳಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.