ಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಎದುರಾಗಿರುವ ಸಂಕಷ್ಟ ನಿವಾರಣೆಗೆ ಸರಕಾರ ಹಾಗೂ ಜಿಲ್ಲಾಡಳಿತ ದೊಂದಿಗೆ ಆದಿಚುಂಚನಗಿರಿ ಮಠವು ಎಲ್ಲ ರೀತಿಯ ಸಹಕಾರ ನೀಡುವದಾಗಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ ಅಭಯ ನೀಡಿದ್ದಾರೆ.

ಇಲ್ಲಿನ ಗೌಡ ಸಮಾಜದಲ್ಲಿ ಇಂದು ಶ್ರೀಮಠದ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ ಬೆಳ್ಳೂರು ಆಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಖುದ್ದಾಗಿ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದ ಅವರು, ಮಾಧ್ಯಮ ಗಳೊಂದಿಗೆ ಮಾತನಾಡಿದರು.ವಿಪರೀತ ಮಳೆಯೊಂದಿಗೆ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಜಲಪ್ರವಾಹದಿಂದ ಎದುರಾಗಿರುವ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಜೀವ ಹಾನಿಯೊಂದಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಿರುವ ಸಂತ್ರಸ್ತರ ಸಹಿತ ಎಲ್ಲರ ಆರೋಗ್ಯಕ್ಕಾಗಿ ಈ ಶಿಬಿರವನ್ನು ಮಠದಿಂದ ಹಮ್ಮಿಕೊಂಡಿ ರುವದಾಗಿ ಅವರು ವಿವರಿಸಿದರು.

ನಿನ್ನೆ ಕುಶಾಲನಗರ ಹಾಗೂ ಇಂದು ಮಡಿಕೇರಿಯಲ್ಲಿ ವ್ಯವಸ್ಥೆ ಗೊಳಿಸಿರುವ ಶಿಬಿರದಲ್ಲಿ ವೈದ್ಯಕೀಯ ಕಾಲೇಜಿನ ಎಲ್ಲ ರೀತಿ ಸಮಸ್ಯೆಗಳ ಸಂಬಂಧ ನುರಿತ ತಜ್ಞ ವೈದ್ಯರಿಂದ ತಪಾಸಣೆಯೊಂದಿಗೆ ತುರ್ತು ಚಿಕಿತ್ಸೆ ಹಾಗೂ ಔಷಧೋಪಚಾರ ಕಲ್ಪಿಸಲಾಗಿದೆ ಎಂದ ಶ್ರೀಗಳು, ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳ ಅಗತ್ಯವಿ ರುವವರಿಗೆ ವೈದ್ಯಕೀಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯೊಂದಿಗೆ ಸಂಪೂರ್ಣ ಗುಣಮುಖರಾಗುವ ತನಕ ನೋಡಿ ಕೊಳ್ಳಲಾಗುವದು ಎಂದು ವಿವರಿಸಿದರು.

ಮಠ ಸಹಯೋಗ: ಕೊಡಗಿನಲ್ಲಿ ಇದುವರೆಗೆ ಕಂಡುಕೇಳರಿಯದ ಪ್ರಾಕೃತಿಕ ವಿಕೋಪದಿಂದ ಮನೆ, ಮಠ ಕಳೆದುಕೊಂಡವರಿಗೆ ಸರಕಾರ ಹಾಗೂ ಆಡಳಿತದಿಂದ ನೆರವು ಕಲ್ಪಿಸುವಲ್ಲಿ ತಾವೂ ಮುಖ್ಯಮಂತ್ರಿಗಳ ಗಮನ ಸೆಳೆಯುವದಾಗಿ ನುಡಿದ ಸ್ವಾಮೀಜಿ, ಮಠದಿಂದಲೂ ಈ ದಿಸೆಯಲ್ಲಿ ಸಹಯೋಗ ನೀಡಲಾಗುವದು ಎಂದು ಪ್ರಕಟಿಸಿದರು.

ಆ ದಿಸೆಯಲ್ಲಿ ಆದ್ಯತೆಯ ಮೇರೆಗೆ ಜನರ ಆರೋಗ್ಯ ರಕ್ಷಣೆಗಾಗಿ ಉಚಿತ ಶಿಬಿರ ಏರ್ಪಡಿಸಿದ್ದು,

(ಮೊದಲ ಪುಟದಿಂದ) ಮಾದಾಪುರ, ಹಟ್ಟಿಹೊಳೆ ಸೇರಿದಂತೆ ನೂತನ ಜಿ.ಪಂ. ಭವನದಲ್ಲಿ ಉಳಿದುಕೊಂಡಿರುವ ಸಂತ್ರಸ್ತರನ್ನು ತಾವು ಖುದ್ದು ಸಂತೈಸುವದರೊಂದಿಗೆ ಆತ್ಮಸ್ಥೈರ್ಯ ತುಂಬಲು ಧಾವಿಸಿದಾಗಿ ಮಾರ್ನುಡಿದರು. ಒಟ್ಟಿನಲ್ಲಿ ಕೊಡಗಿನ ಜನತೆಗೆ ಅಪಾಯ ಎದುರಾದ ಬೆನ್ನಲ್ಲೇ, ಸಾಧ್ಯವಿರುವ ಎಲ್ಲ ಸಹಕಾರ ಒದಗಿಸುವಲ್ಲಿ ಮಠ ಪ್ರಯತ್ನಶೀಲವಾಗಿದೆ ಎಂದು ನಿರ್ಮಲಾನಂದ ಸ್ವಾಮೀಜಿ ಆಶಯದ ನುಡಿಯಾಡಿದರು.

ಹಳ್ಳಿ ಹಳ್ಳಿಗೆ ಸೇವೆ: ಜಿಲ್ಲೆಯಲ್ಲಿ ಆರೋಗ್ಯ ತೊಂದರೆಗೆ ಒಳಗಾಗಿರುವ ಜನತೆಗೆ 15 ದಿನಗಳ ತನಕ ಮಠದ ಗ್ರಾಮ ವೈದ್ಯ ನೆರವು ಯೋಜನೆಯಡಿ ಮೊಬೈಲ್ ಸೇವೆ ನೀಡಲಾಗುವದು ಎಂದು ಮಾಹಿತಿ ನೀಡಿದರು. ವೈದ್ಯ ಸಿಬ್ಬಂದಿಯ ಈ ತಂಡ ವಾಹನದೊಂದಿಗೆ ಅಗತ್ಯವಿರುವ ಎಲ್ಲೆಡೆ ಸಂಚರಿಸಿ ಆರೋಗ್ಯ ಸೇವೆ ಒದಗಿಸಲಿರುವದಾಗಿ ವಿವರಿಸಿದರು. ವೈದ್ಯಕೀಯ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಧರ್ಮೇಂದ್ರ, ಶಿವಕುಮಾರ್, ಮೇಲ್ವಿಚಾರಕಿ ಕೊಡಗು ಮೂಲದ ಚಿಲ್ಲನ ವಿಶಾಲಾಕ್ಷಿ, ಡಾ. ಚೆರಿಯಮನೆ ದೀಪು ಚಂಗಪ್ಪ ನೇತೃತ್ವದಲ್ಲಿ ಸುಮಾರು 90 ಮಂದಿ ವೈದ್ಯ ಸಿಬ್ಬಂದಿ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು 400ಕ್ಕೂ ಅಧಿಕ ಮಂದಿಗೆ ತಪಾಸಣೆಯೊಂದಿಗೆ ಔಷಧೋಪಚಾರ ನೀಡಿದರು. ಶ್ರೀಮಠದ ರಾಮನಗರ ಶಾಖೆಯ ಅನ್ನದಾನೇಶ್ವರ ಮಹಾಸ್ವಾಮೀಜಿ, ಹಾಸನ ಶಾಖೆಯ ಶಂಭುನಾಥ, ಶಾಸಕ ಕೆ.ಜಿ. ಬೋಪಯ್ಯ, ಕೊಡಗು ಗೌಡ ಒಕ್ಕೂಟ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಇತರ ಪ್ರಮುಖರು ಸಮಾಜದ ಪದಾಧಿಕಾರಿ ಗಳು ಹಾಜರಿದ್ದು, ಸ್ವಾಮೀಜಿಗಳನ್ನು ಬರಮಾಡಿ ಕೊಂಡರು. ನಿರ್ಮಲಾ ನಂದ ಸ್ವಾಮೀಜಿ ಖುದ್ದಾಗಿ ರೋಗಿಗಳನ್ನು ಮಾತನಾಡಿಸಿ ಆತ್ಮಸ್ಥೈರ್ಯ ತುಂಬಿದರು. ಬಳಿಕ ಜಿ.ಪಂ. ನೂತನ ಭವನದಲ್ಲಿ ಆಸರೆ ಪಡೆದಿರುವ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಚರಿಸಿ ನೊಂದವರ ನೋವು ಆಲಿಸಿದ ಬಳಿಕ ಇಲ್ಲಿಂದ ಮರಳಿದರು.