ಮಡಿಕೇರಿ, ಆ. 26: ಒಂದೆಡೆ ಮನೆ-ಆಸ್ತಿ ಎಲ್ಲವನ್ನೂ ಕಳೆದು ಕೊಂಡ ಸಂಕಷ್ಟ; ಮತ್ತೊಂದೆಡೆ ಆಪದ್ಬಾಂಧವರೆನಿಸಿದ ಉದಾರಿಗಳು, ಸಂಘ ಸಂಸ್ಥೆಗಳ ಪ್ರಮುಖರ ಉದಾರತೆಯಿಂದ ದೊರೆತ ಕಂಕಣ ಭಾಗ್ಯ- ಈ ಸ್ನೇಹಪರ ನಿಲುವಿನಿಂದ ಸಂತ್ರಸ್ಥೆ ಯುವತಿಯೊಬ್ಬಳು ಅವಿಸ್ಮರಣೀಯ ಸನ್ನಿವೇಶದಲ್ಲಿ ಸೌಭಾಗ್ಯವತಿಯಾದಳು.

ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಬೆ. 10.30 ರ ಸುಮುಹೂರ್ತದಲ್ಲಿ ಮಕ್ಕಂದೂರುವಿನ ಯುವತಿ ಮಂಜುಳಾ ಕೇರಳದÀ ಕÀಣ್ಣೂರುವಿನ ಯುವಕ ರಜೀಶ್‍ನಿಂದ ಮಾಂಗಲ್ಯ ಧಾರಣೆ ಮಾಡಿಸಿಕೊಂಡಾಗ ನಾದಸ್ವರದ ಆಲಾಪನೆ, ಅರ್ಚಕರ ಮಂತ್ರ ಘೋಷ, ನೆರೆದವರ ಹರ್ಷೋದ್ಗಾರ ದೈವ ಸನ್ನಿಧಿಯಲ್ಲಿ ಏಕಕಾಲಕ್ಕೆ ಮೊಳಗಿತು. ನಗರದ ಮಹಿಳೆಯರು, ಪುರುಷರು ಅಧಿಕ ಸಂಖ್ಯೆಯಲ್ಲಿ ಸೇರಿ ವಧೂವರರನ್ನು ಹರಸಿದರು.

ದೇವಾಲಯದ ಸುತ್ತ ಪ್ರದಕ್ಷಿಣೆ ಬಂದು ಪ್ರಾರ್ಥನೆ ಸಲ್ಲಿಸಿ ಮ.12 ಗಂಟೆ ಬಳಿಕ ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಸಂತ್ರಸ್ಥೆ ನೆಲೆಗೊಂಡಿದ್ದ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ಮೆಹಂದಿ ಹಚ್ಚುವ ಕಾರ್ಯಕ್ರಮದಿಂದ ಪ್ರಾರಂಭಿಸಿ ಶನಿವಾರ ಸಂಜೆ ಯಿಂದಲೇ ವಿವಾಹದ ಎಲ್ಲ ವಿಧಿ ವಿಧಾನಗಳನ್ನು ಚಾಚೂ ತಪ್ಪದೆ ನೆರವೇರಿಸಲಾಯಿತು. ಇತರ ಸಂತ್ರಸ್ಥ ಮಹಿಳೆಯರೂ ಇದರಲ್ಲಿ ನಗು ಮುಖದಿಂದ ಪಾಲ್ಗೊಂಡು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾದರು.

ಆ.. ದಿನ... ತಾ.16 ರ ಅಶುಭ ಕಾಲದಲ್ಲಿ

(ಮೊದಲ ಪುಟದಿಂದ) ಮಕ್ಕಂದೂರುವಿನ ರಾಣಿ ಪೈಸಾರಿಯಲ್ಲಿ ಮನೆ ಮಾಡಿಕೊಂಡು ನೆಮ್ಮದಿಯಿಂದಿದ್ದ ಕುಟುಂಬಕ್ಕೆ ಬರ ಸಿಡಿಲಿನಂತೆ ಭೂಕುಸಿತ, ಜಲ ಪ್ರವಾಹ ಬಂದೆರಗಿತು. ತನ್ನ ಅಣ್ಣ, ತಾಯಿಯೊಂದಿಗೆ ಯುವತಿ ಮಂಜುಳಾ ಬದುಕಿದರೆ ಸಾಕೆಂದು ಎಲ್ಲವನ್ನೂ ಬಿಟ್ಟು ಬಂದು ಗ್ರಾಮಸ್ಥರ ನೆರವಿನಿಂದ ಸಂತ್ರಸ್ಥ ಕೇಂದ್ರಕ್ಕೆ ಬಂದು ಸೇರಿದ್ದಳು. ಈಕೆಯ ವಿವಾಹ ಇಂದು ಮಕ್ಕಂದೂರುವಿನಲ್ಲಿ ನೆರವೇರಲು ಈ ಹಿಂದೆ ತಯಾರಿ ನಡೆದಿತ್ತು. ಆದರೆ, ವಿಧಿಯಾಟವೇ ಬೇರೆ. ಎಲ್ಲ ಕಳೆದುಕೊಂಡು ಈ ಕುಟುಂಬ ಇಲ್ಲಿ ಆಶ್ರಯ ಪಡೆದಿದೆ. ಅನೇಕ ಮಾಧ್ಯಮಗಳು ಈ ಕುರಿತು ಮಾನವೀಯ ವರದಿ ಪ್ರಚುರಗೊಳಿಸಿದಾಗ ವಿಷಯ ತಿಳಿದ ಸೇವಾ ಭಾರತಿ ಕಾರ್ಯಕರ್ತರು, ಲಯನ್ಸ್ ಕ್ಲಬ್ ಹಾಗೂ ದೈವಜ್ಞ ಬ್ರಾಹ್ಮಣರ ಸಂಘಗಳ ಸದಸ್ಯರು ಯುವತಿಗೆ ಧೈರ್ಯ ಹೇಳಿದರು. ಸೇವಾ ಭಾರತಿಯ ಯೋಗ ಗುರು ಮಹೇಶ್, ಮಡಿಕೇರಿ ಲಯನ್ಸ್ ಕ್ಲಬ್‍ನ ನೂತನ ಅಧ್ಯಕ್ಷ ದಾಮೋದರ್ ಪ್ರಯತ್ನದಿಂದ ಅನೇಕ ಉದಾರಿಗಳು ನೆರವಿಗೆ ಬಂದರು. ಆಹಾರ ಮತ್ತು ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ತನ್ನ ಸ್ವಂತ ಹಣ ರೂ. 50 ಸಾವಿರ ನೀಡಿದರು. ಮಹಿಳೆಯೊಬ್ಬರು ರೂ. 25 ಸಾವಿರ ಕೊಟ್ಟರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ರೂ. 50 ಸಾವಿರ ವಾಗ್ದಾನವಿತ್ತರು. ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ್ ಕುಮಾರ್ ವಿವಾಹ ವ್ಯವಸ್ಥೆಗೆ ಅನುವು ಮಾಡಿಕೊಟ್ಟರು. ಅರ್ಚಕ ಶ್ರೀ ವಾತ್ಸವ ಭಟ್ ವಿಧಿ ವಿಧಾನಗಳೊಂದಿಗೆ ವಿವಾಹ ನೆರವೇರಿಸಿದರು.ನಗರದ ಅನೇಕ ಪ್ರÀಮುಖ ವ್ಯಕ್ತಿಗಳು ಇಂದು ವಿವಾಹ ಸಂಭ್ರಮದಲ್ಲಿ ಪಾಲ್ಗೊಂಡರು.

ವಿವಾಹದ ಬಳಿಕ ಯುವತಿ ಮಂಜುಳಾಳ ಅಭಿಪ್ರಾಯ ಬಯಸಿದಾಗ “ ಮಕ್ಕಂದೂರಿನಲ್ಲಿಯೇ ಮದುವೆ ನಡೆದಿದ್ದರೂ ಇಂತಹ ಸಂಭ್ರಮ ಇರುತ್ತಿರಲಿಲ್ಲ. ಇಂದು ಸ್ಥಳೀಯರ ಸಹಕಾರದಿಂದ ತಾನು ಯಾರಿಗೆ ಧನ್ಯವಾದ ಹೇಳುವದು ಎಂದು ತಿಳಿಯದಾಗಿದೆ ಎಂದು ತುಂಬು ಹೃದಯದ ನುಡಿಯಾಡಿದರು. ಮಂಜುಳಾ ಈ ಹಿಂದೆ ಮಡಿಕೇರಿಯ ಔಷಧಿ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ತಂದೆಯಿಲ್ಲದ ಈಕೆಯ ತಾಯಿ ಬೇಬಿ ಅವರ ಅಭಿಪ್ರಾಯ ಬಯಸಿದಾಗ ಈಕೆಯ ತಂದೆ ಅವಳು ಮೂರು ತಿಂಗಳ ಮಗುವಾಗಿದ್ದಾಗಲೇ ಇಹಲೋಕ ತ್ಯಜಿಸಿದರು.ಇದೀಗ ಜನರ ಸಹಕಾರದಿಂದಷ್ಟೆ ತನ್ನ ಮಗಳ ವಿವಾಹ ನಡೆಯಲು ಸಾಧ್ಯವಾಯಿತು ಎಂದು ಕೃತಜ್ಞತೆ ಸೂಚಿಸಿದರು. ಯುವತಿಯ ಅಣ್ಣ ಅಣ್ಣಪ್ಪ ದುರ್ಘಟನೆ ಸಂದರ್ಭ ತನ್ನ ಆಟೊ ರಿಕ್ಷಾವನ್ನು ಊರಿನಲ್ಲಿಯೇ ಬಿಟ್ಟು ಬಂದು ಇಲ್ಲಿ ಆಶ್ರಯ ಪಡೆದಿರುವದಾಗಿ ತಿಳಿಸಿದರು. ಇಂದು ಅದ್ದೂರಿಯಿಂದ ತನ್ನ ಸಹೋದರಿಯ ವಿವಾಹ ನಡೆದಿದ್ದು ತಮ್ಮ ಊರಿನಲ್ಲಿಯಾಗಿದ್ದರೂ ಹೀಗೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಭಾವನಾತ್ಮಕ ನುಡಿಯಾಡಿದರು.

ವರನಿಗೆ ತಂದೆಯಿಲ್ಲ; ತಾಯಿ ಇಂದು ವಿವಾಹಕ್ಕೆ ಬರಲಾಗಲಿಲ್ಲ. ಸಹೋದರಿ ರೇಜಿನ ಮಾತ್ರ ಪಾಲ್ಗೊಂಡಿದ್ದರು.ವರ ರಜೀಶ್ ಕಣ್ಣೂರುವಿನಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು ವಿವಾಹ ಸಂದರ್ಭ ಸೇವಾ ಭಾರತಿ ಪರವಾಗಿ ಮಹೇಶ್, ರಾಜೇಶ್, ರಾಕೇಶ್ ಮೊದಲಾದವರಿದ್ದು, ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳಿಂದ ದಾಮೋದರ್, ಮಧುಕರ್, ಮೋಹನ್ ದಾಸ್, ಮೋಹನ್ ಕುಮಾರ್, ಎನ್.ಡಿ.ರವಿ, ಗೀತಾ ಮಧುಕರ್, ವನಜಾ ದಾಮೋದರ್, ಪ್ರತಿಮಾ, ಬೇಬಿ ಮ್ಯಾಥಿವ್, ಜೆ.ಬಿ. ಕೋಠಿ, ನವೀನ್ ಅಂಬೆಕಲ್ ಮೊದಲಾದವರು ಹಾಜರಿದ್ದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆಣ್ಣೇಕರ್ ಸೇರಿದಂತೆ ಹಲವರು ಮದುವೆಗೆ ತೆರಳಿ ನವ ಜೋಡಿಗೆ ಶುಭ ಹಾರೈಸಿದರು.

ಸೆ. 12ರಂದು ಮತ್ತೋರ್ವ ಸಂತ್ರಸ್ಥೆ ಮಕ್ಕಂದೂರುವಿನ ರಂಜಿತಾ ಅವರ ವಿವಾಹಕ್ಕೆ ಸಂಘ ಸಂಸ್ಥೆಗಳು ತಯಾರಿ ನಡೆಸಿವೆ.