ಮಡಿಕೇರಿ, ಆ. 26: ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಅಮಾಯಕ ಜನರು ತತ್ತರಿಸಿದ್ದಾರೆ. ಈ ನಡುವೆ ಇತರ ಭಾಗಗಳಿಗೆ ಸಂಪರ್ಕವೇ ಕಡಿತಗೊಂಡು ಕೊಡಗಿನ ಸ್ಥಿತಿ ಅಯೋಮಯವಾಗಿದೆ. ಈ ಸಂಪರ್ಕವನ್ನು ಪುನರ್‍ಸ್ಥಾಪನೆ ಗೊಳಿಸುವ ಉದ್ದೇಶ ತಮ್ಮದಾಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ, ಮಾಜಿ ಸಂಸದ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್. ವಿಶ್ವನಾಥ್ ಇಂದು ಇಲ್ಲಿ ತಿಳಿಸಿದರು.ಹತ್ತು ಮಂದಿ ನುರಿತ ಇಂಜಿನಿಯರ್‍ಗಳೊಂದಿಗೆ ಜಿಲ್ಲೆಗೆ ಆಗಮಿಸಿದ್ದ ಅವರು, ಪತ್ರಿಕಾ ಗೋಷ್ಠಿಗೂ ಮುನ್ನ ಜಿಲ್ಲಾಧಿಕಾರಿಯವ ರೊಂದಿಗೆ ವಿಶೇಷ ಸÀಭೆ ನಡೆಸಿದರು. ಪ್ರಸಕ್ತ ಮಂಗಳೂರು ವಿಭಾಗ ಮತ್ತಿತರ ಹಲವು ಕಡೆ ರಸ್ತೆ, ಸೇತುವೆ ಕುಸಿತಗೊಂಡು ಸಂಪರ್ಕ ಸ್ಥಗಿತಗೊಂಡಿರುವದನ್ನು ಸರಿಪಡಿಸಲು ತಂತ್ರಜ್ಞರನ್ನು ಕರೆಸಿರುವದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳ ಕುರಿತು ಜಿಲ್ಲಾಧಿಕಾರಿ ಶ್ರೀವಿದ್ಯಾ ವಿವರಿಸಿದರು. ಈ ವಿಭಾಗಗಳಲ್ಲಿ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿರುವದಾಗಿ ನುಡಿದರು. ಈ ಸಂದರ್ಭ 5 ಜಿಲ್ಲೆಗಳ ನುರಿತ ಇಂಜಿನಿಯರ್‍ಗಳ ಸಂಸ್ಥೆಯ ಪರವಾಗಿ ಎಂ. ಲಕ್ಷ್ಮಣ್ ಅವರು ಮಾತನಾಡಿ, ಶಾಶ್ವತವಾಗಿ ಹಾಗೂ ಶೀಘ್ರವಾಗಿ ಆಧುನಿಕ ತಂತ್ರಜ್ಞಾನದೊಂದಿಗೆ ಈ ರಸ್ತೆ ಸೇತುವೆಗಳ ದುರಸ್ತಿ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾಗಿ ತಮ್ಮ ಪರಿಣಿತ ತಂಡವು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಯಾವ ರೀತಿಯ ತಂತ್ರಜ್ಞಾನ ಅಳವಡಿಸಬೇಕೆಂದು ಮಾರ್ಗದರ್ಶನ ನೀಡುತ್ತದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಮತ್ತು ಪ್ರಧಾನ ಕಾರ್ಯದರ್ಶಿಯವರು ತಮ್ಮ ತಂಡಕ್ಕೆ ಅಧ್ಯಯನ ನಡೆಸಲು ಸೂಚನೆ ನೀಡಿದ್ದು, ವಿಶ್ವನಾಥ್ ಅವರ ನೇತೃತ್ವದಲ್ಲಿ ತೆರಳುವಂತೆ ತಿಳಿಸಿದ್ದರು ಎಂದು ವಿವರಿಸಿದರು. ಅಧ್ಯಯನದ ಬಳಿಕ ಈ ಬಗ್ಗೆ ಮುಖ್ಯಮಂತ್ರಿ, ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನಮಂತ್ರಿ ಕಚೇರಿಗೂ ಮಾಹಿತಿ ನೀಡುವದಾಗಿ ಅವರು ತಿಳಿಸಿದರು. ಇಸ್ರೋ ವಿಜ್ಞಾನಿ ಜಗನ್ನಾಥ್ ಮಾತನಾಡಿ, ಈಗಾಗಲೇ ಕೆಲವು ಕಡೆ ತಾವು ಪರಿಶೀಲನೆ ನಡೆಸಿದ್ದು, ದುರಸ್ತಿಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಅತ್ಯಗತ್ಯ ಎಂದು ಮಾಹಿತಿ ನೀಡಿದರು.

ಈ ತಂಡದಲ್ಲಿ ನುರಿತ ಇಂಜಿನಿಯರ್‍ಗಳಾದ ಕೃಷ್ಣಸ್ವಾಮಿ, ಎ.ಎ. ಸತೀಶ್, ರಾಜಶೇಖರ್ ಗೌಡ, ರವಿ, ನರಸಿಂಹ ಮೂರ್ತಿ, ಸುರೇಶ್ ಬಾಬು, ಕೃಷ್ಣರಾಜು, ರತನ್ ಬಾಬು ಮೊದಲಾದವರಿದ್ದಾರೆ.

ಪ್ರವಾಸೋದ್ಯಮ ನಿಲ್ಲಬಾರದು

ಹೆಚ್.ವಿಶ್ವನಾಥ್ ಅವರು, ಪತ್ರಿಕಾಗೋಷ್ಠಿ (ಮೊದಲ ಪುಟದಿಂದ) ಸಂದರ್ಭ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಲ್ಲಬಾರದು. ಈಗಾಗಲೇ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಸ್ವಲ್ಪವಾದರೂ ಸುಧಾರಿಸಬೇಕಾದರೆ ಪ್ರವಾಸೋದ್ಯಮ ಉಳಿಯಲೇಬೇಕು. ಆದರೆ ಇದೀಗ ಇತರ ವಿಭಾಗಗಳಿಗೆ ಸಂಪರ್ಕವೇ ಕಡಿತಗೊಂಡಿದ್ದು, ಪ್ರವಾಸೋದ್ಯಮಕ್ಕೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹಾಗೂ ಜನರ ರಕ್ಷಣಾ ಕಾರ್ಯವನ್ನು ಸುಲಲಿತಗೊಳಿಸಲು ರಸ್ತೆ ಸೇತುವೆಗಳನ್ನು ದುರಸ್ತಿಪಡಿಸಲು ತಾನು ಆಸ್ಥೆ ವಹಿಸಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಇಂಜಿನಿಯರ್‍ಗಳ ಸಹಕಾರದಿಂದ ಈ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಮಾಜೀ ಸೈನಿಕರ ಸಂಸ್ಥೆಯ ಸಹಕಾರವನ್ನು ಪಡೆಯಲಾಗುತ್ತದೆ. ಮುಖ್ಯಮಂತ್ರಿ ಯವರು ಈ ಬಗ್ಗೆ ಆಸ್ಥೆ ವಹಿಸಿದ್ದಾರೆ ಎಂದು ಮಾಹಿತಿಯಿತ್ತರು.

ಸಮನ್ವಯ ಸಮಿತಿ ಸಭೆ ನಡೆಸಲಿ

ರಾಜ್ಯ ರಾಜಕೀಯದ ಕುರಿತು ಪತ್ರಕರ್ತರು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮನ್ವಯ ಸಮಿತಿಯ ಗೊಂದಲದ ಬಗ್ಗೆ ಕೇಳಿದಾಗ ಸಿದ್ದರಾಮಯ್ಯ ಅವರು ಸರ್ವರನ್ನು ಸಮತೋಲನ ದಿಂದ ನೋಡ ಬೇಕಾಗಿದೆ. ಉದ್ವೇಗಕ್ಕೆ ಒಳಗಾಗಬಾರದು ಎಂದು ಸಲಹೆಯಿತ್ತರು. ಹಿಂದೆ ಕೇಂದ್ರದಲ್ಲಿ ಯುಪಿಎ ಮತ್ತು ಈಗ ಎನ್‍ಡಿಎ ಆಡಳಿತದಲ್ಲಿ ಅನೇಕ ಪಕ್ಷಗಳ ಸಮ್ಮಿಶ್ರ ಸರ್ಕಾರವಿದ್ದರೂ ಹೊಂದಾಣಿಕೆ ನಡೆಸಿಕೊಂಡು ಹೋಗುತ್ತಿರುವಾಗ ಕೇವಲ ಎರಡೇ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕದಲ್ಲಿ ಹೊಂದಾಣಿಕೆ ಸುಲಭ ಸಾಧ್ಯ ಎಂದರು. ಸಮನ್ವಯ ಸಮಿತಿಯಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಸೇರಿಸಿಕೊಂಡರೆ ಸಮನ್ವಯತೆ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಸಲಹೆಯಿತ್ತರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‍ನ ಕೆ.ಎಂ. ಗಣೇಶ್ ಮತ್ತಿತರರು ಹಾಜರಿದ್ದರು.