ಸುಂಟಿಕೊಪ್ಪ, ಆ. 26: ಅತಿವೃಷ್ಠಿಯಿಂದ ಮನೆ ಕಳೆದುಕೊಂಡ ವರಿಗೆ ಮನೆ ನಿರ್ಮಿಸಿಕೊಡುವದಲ್ಲದೆ ಭಾಗಶ; ಮನೆಹಾನಿಯಾದವರಿಗೂ ಪರಿಹಾರ ಒದಗಿಸಲಾಗುವದು.

ಸಂತ್ರಸ್ತರ ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು. ಟಿ. ಖಾದರ್ ಹೇಳಿದರು. ಸಂತ ಮೇರಿ ಆಂಗ್ಲ ಮಾಧ್ಯಮ, ಸಂತಅಂತೋಣಿ ಶಾಲೆಯಲ್ಲಿ ಆಶ್ರಯ ಪಡೆದ ನಿರಾಶ್ರಿತರನ್ನು ಭೇಟಿ ಮಾಡಿ ಶಾಂತ್ವನ ಹೇಳಿದ ಅವರು ಬದುಕು ಮೊದಲಿನ ಸ್ಥಿತಿಯಂತೆ ಕಟ್ಟಿಕೊಳ್ಳಲು ಸರಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ. ತಾತ್ಕಾಲಿಕವಾಗಿ 1 ಕುಟುಂಬಕ್ಕೆ 3800 ರೂ. ಆರ್ಥಿಕ ನೆರವು ನೀಡಲಾಗು ವದು ಎಂದರು.

ಈಗ ಸ್ವಲ್ಪ ಮಳೆ ಕಡಿಮೆ ಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡ ಗ್ರಾಮೀಣ ಪ್ರದೆಶದ ರಸ್ತೆಯನ್ನು 2 ದಿನದಲ್ಲಿ ಸರಿಪಡಿಸಲಾಗುವದು ಎಂದರು. ಮನೆಗೆ ತೆರಳಲು ಎಲ್ಲಾ ಕಡೆಯಿಂದ ರಸ್ತೆ ಇಲ್ಲದಾಗಿದೆ ಎಂದು ಹಾಲೇರಿ ಗ್ರಾಮದ ಸಂತ್ರಸ್ತರಾದ ಸಾವಿತ್ರಿ ಗಿರಿಜ ಅಂಗಾರ ಅವಲತ್ತುಕೊಂಡರು. ಹೋಬಳಿ ವ್ಯಾಪ್ತಿಯಲ್ಲಿ ಕುಸಿದಿರುವ ರಸ್ತೆಗಳನ್ನು ಆದಷ್ಟು ಬೇಗನೇ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗುವದು. ಇನ್ನಷ್ಟು ಗ್ರಾಮಗಳ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಕೂಡಲೇ ವರದಿಯನ್ನು ನೀಡಿದರೆ ಪರಿಹಾರ ತಕ್ಷಣವೇ ಸಿಗಲಿದೆ. ಅಲ್ಲದೆ ವಸತಿಗಳ ಹಾನಿಯ ಬಗ್ಗೆ ಪುನರ್ವಸತಿ ಕೇಂದ್ರದ ಮುಖ್ಯ ಕಾರ್ಯದರ್ಶಿ ಅನ್ಬುಕುಮಾರ್ 2-3 ದಿನಗಳಿಂದ ಇಲ್ಲಿಯೇ ಮೊಕ್ಕಾಂ ಹೂಡಿದ್ದು ಸಂಪೂರ್ಣ ವರದಿಯನ್ನು ನೀಡುತ್ತಿದ್ದಾರೆ. ಸಂತ್ರಸ್ತರನ್ನು ಗುರುತಿಸಿ ಅವರಿಗೆ ಸರಕಾರದ ಸೌಲಭ್ಯ ಒದಗಿಸಿಕೊಡಲಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದರು.

ಮಾಜಿ ಶಾಸಕರಾದ ಕೆ.ಎಂ.ಇಬ್ರಾಹಿಂ, ರಾಜ್ಯ ವಸತಿ ನಿರ್ದೇಶಕರಾದ ಪವನ್ ಕುಮಾರ್ ಜಿಲ್ಲಾ ಎಸ್ಪಿ ಸುಮನ್ ಪಣ್ಣೇಕರ್, ತಹಶೀಲ್ದಾರ್ ಮಹೇಶ್, ಮಾಜಿ ಗ್ರಾ.ಪಂ.ಅಧ್ಯಕ್ಷ ಎಂಎ.ಉಸ್ಮಾನ್ ಮತ್ತಿತರರು ಹಾಜರಿದ್ದರು.