ವೀರಾಜಪೇಟೆ, ಆ. 26: ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ಹನ್ನೊಂದು ಕಡೆಗಳಲ್ಲಿ ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸಿದ್ದು 196 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ. ಪ್ರಸ್ತುತ ಮೂರು ಕಡೆಗಳಲ್ಲಿ ಮಾತ್ರ ನಿರಾಶ್ರಿತರು ಉಳಿದುಕೊಂಡಿದ್ದಾರೆ. ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ. ಹನ್ನೊಂದು ಕಡೆಗಳಲ್ಲಿ 8 ಪರಿಹಾರ ಕೇಂದ್ರಗಳು ಸರ್ಕಾರದಾಗಿದ್ದು, ಉಳಿದ ಮೂರು ಕೇಂದ್ರಗಳು ಖಾಸಗಿ ಸಂಘಟನೆಗಳ ಕೇಂದ್ರಗಳಾಗಿದ್ದವು ಸರಕಾರದ ವತಿಯಿಂದ ತೆರೆಯಲಾದ ಎಲ್ಲ ಗಂಜಿ ಪರಿಹಾರ ಕೇಂದ್ರಗಳ 167 ಮಂದಿ ಸಂತ್ರಸ್ತರಿಗೆ ಚೆಕ್‍ಗಳನ್ನು ವಿತರಿಸಲಾಗಿದೆ ಎಂದು ತಹಶೀಲ್ದಾರ್ ಗೊವಿಂದರಾಜು ತಿಳಿಸಿದ್ದಾರೆ.

ಜಿಎಂಪಿ ಶಾಲೆ ಕರಡಿಗೋಡು, ಬಸವೇಶ್ವರ ಸಮುದಾಯ ಭವನ ಸಿದ್ದಾಪುರ, ಸರ್ಕಾರಿ ಪ್ರಾಥಮಿಕ ಶಾಲೆ ಕೊಂಡಂಗೇರಿ, ಸರ್ಕಾರಿ ಪ್ರಾಥಮಿಕ ಶಾಲೆ ಚಿಕ್ಕಪೇಟೆ ವೀರಾಜಪೇಟೆ, ಅಂಗನವಾಡಿ ಕೇಂದ್ರ ಸುಂಕದ ಕಟ್ಟೆ, ಸಮುದಾಯ ಭವನ ಸುಂಕದಕಟ್ಟೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಕಾಡು, ಪರಿಸರ ಸಂರಕ್ಷಣಾ ಕೇಂದ್ರ ಮಗ್ಗುಲ ವೀರಾಜಪೇಟೆ ಇವುಗಳು ಸರ್ಕಾರದ ಪರಿಹಾರ ಕೇಂದ್ರಗಳಾಗಿವೆ.

ದಿನೇಶ್ ಲ್ಯೆನ್ ಮನೆ ಸಿದ್ದಾಪುರ, ಹೊಸಬಡಾವಣೆ ದೇವರಪುರ, ವಿವೇಕ್ ಅವರ ಮನೆ ಅಂಬುಕೋಟೆ ಪ್ಯೆಸಾರಿ ಮಾಯಮುಡಿ ಇವುಗಳು ಖಾಸಗಿ ಪರಿಹಾರ ಕೇಂದ್ರಗಳಾಗಿದೆ. ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಎಲ್ಲ ಕುಟುಂಬಗಳಿಗೆ ಸರ್ಕಾರದ ವತಿಯಿಂದ 3800 ರೂಗಳನ್ನು ವಿತರಿಸಲಾಗುತ್ತಿದೆ. ಖಾಸಗಿಯಾಗಿ ಉಳಿದುಕೊಂಡವರಿಗೆ ಪರಿಹಾರ ಮೊತ್ತ ನೀಡಲು ಸರಕಾರದ ಯಾವದೇ ಆದೇಶವಿಲ್ಲ ಎಂದು ಗೋವಿಂದರಾಜು ಹೇಳಿದರು.

ಸೇವಾ ಭಾರತಿ ಕೇಂದ್ರ : ವೀರಾಜಪೇಟೆಯ ಜಯಪ್ರಕಾಶ್ ನಾರಾಯಣ್ ಶಾಲೆಯಲ್ಲಿ ಆರ್‍ಎಸ್‍ಎಸ್ ಹಾಗೂ ಸಂಘ ಪರಿವಾರದ ವತಿಯಿಂದ ಸೇವಾ ಭಾರತಿ ಕೇಂದ್ರವನ್ನು ಪ್ರಾರಂಭಿಸಿ ನಿರಾಶ್ರಿತರಿಗೆ ಬರುವ ಎಲ್ಲ ಸಾಮಗ್ರಿ ಸರಂಜಾಮುಗಳನ್ನು ಯಾವದೇ ಲೋಪ ಇಲ್ಲದೆ ವಿತರಿಸಲಾಗಿದೆ. ಕಳೆದ 8 ದಿನಗಳಿಂದ ಸಂಘ ಪರಿವಾರದ ಆರ್‍ಎಸ್‍ಎಸ್‍ನ ನಗರ ಕಾರ್ಯವಾಹ ಪುರುಷೋತ್ತಮ್, ನಗರ ಸಂಘಟಕ ಪ್ರಮುಖ್ ಹೇಮಂತ್, ವಿಶ್ವಹಿಂದೂ ಪರಿಷತ್‍ನ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ, ಭಜರಂಗದಳದ ತಾಲೂಕು ಅಧ್ಯಕ್ಷ ವಿವೇಕ್‍ರೈ, ದಿನೇಶ್ ನಾಯರ್, ವಿಶ್ವಹಿಂದೂ ಪರಿಷತ್‍ನ ನಗರ ಅಧ್ಯಕ್ಷ ಪೊನ್ನಪ್ಪ ಸೇರಿದಂತೆ ಸಂಘ ಪರಿವಾರದ ಹಲವಾರು ಕಾರ್ಯಕರ್ತರು ಸೇವಾ ಭಾರತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದರು.

ವೀರಾಜಪೇಟೆಯ ಸೇವಾ ಭಾರತಿ ಪರಿಹಾರ ಕೇಂದ್ರಕ್ಕೆ ಸುವರ್ಣ ನ್ಯೂಸ್ ದೃಶ್ಯ ವಾಹಿನಿ, ಬೆಂಗಳೂರಿನ ಕರಾಟೆ ಕಿಂಗ್ ಶಂಕರ್‍ನಾಗ್ ಅಭಿಮಾನಿಗಳ ಸಂಘ, ಬೆಂಗಳೂರು ಕೊಡವ ಸಮಾಜ, ಕರ್ನಾಟಕ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್ ಬೆಂಗಳೂರು, ಪ್ರಮುಖ ಸಂಘ ಸಂಸ್ಥೆಗಳು ಸೇರಿದಂತೆ ಹಲವಾರು ದಾನಿಗಳು ಜಾತಿ ಮತಭೇದವಿಲ್ಲದೆ ತಂದು ನೀಡಿರುವ ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಪೊರೈಸಲಾಗಿದೆ. ಉಳಿದ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಲಪಿಸಲಾಗುವದು ಎಂದು ಪುರುಷೋತ್ತಮ್ ಮಾಹಿತಿ ನೀಡಿದರು.