ಮಡಿಕೇರಿ, ಆ. 26 : ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದವರಿಗೆ ತಾತ್ಕಾಲಿಕವಾಗಿ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಆರೋಗ್ಯ ಸೇವೆ ಒದಗಿಸಲು ಇಬ್ಬರು ವೈದ್ಯರು ಹಾಗೂ ಇಬ್ಬರು ಶುಶ್ರೂಶಕರನ್ನು ನಿಯೋಜಿಸಲಾಗಿದೆ ಎಂದು ಜಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಹಾಗೂ ಜಿಲ್ಲಾ ಸರ್ಜನ್ ಡಾ. ಜಗದೀಶ್ ಅವರು ತಿಳಿಸಿದ್ದಾರೆ.

ಈಗಾಗಲೇ ಸಂತ್ರಸ್ಥರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮಾತ್ರೆಗಳನ್ನು ಸಾಕಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ, ವಯಸ್ಸಾದವರು, ವಿಕಲಚೇತನರು, ಗರ್ಭಿಣಿಯರು, ಬಾಣಂತಿಯರು ಹೀಗೆ ಎಲ್ಲರಿಗೂ ವೈದ್ಯಕೀಯ ಸೇವೆ ಕಲ್ಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯ ಕಲ್ಪಿಸಲು 10 ಸಂಚಾರಿ ವೈದ್ಯಕೀಯ ತಂಡವನ್ನು ರಚಿಸಲಾಗಿದ್ದು, ಮಡಿಕೇರಿ ತಾಲೂಕಿನ 4, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ತಲಾ 3 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಡಾ.ರಾಜೇಶ್ ಅವರು ಮಾಹಿತಿ ನೀಡಿದರು.

ಈ ತಂಡವು ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಆರೋಗ್ಯ ತಪಾಸಣೆ ನಡೆಸಲಿದೆ. ಇದುವರೆಗೆ ಸುಮಾರು 500 ಮಂದಿಯನ್ನು ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ತೆರೆದ ಬಾವಿ ನೀರಿನ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಸ್ವಚ್ಛತೆ ಕಡೆ ವಿಶೇಷ ಗಮಹರಿಸಲಾಗಿದೆ, ಶುದ್ಧ ಕುಡಿಯುವ ನೀರು, ಬಿಸಿಯಾದ ಆಹಾರ ಉಪಯೋಗಿಸಲು ಸಲಹೆ ಮಾಡಲಾಗಿದೆ ಎಂದು ಡಾ.ರಾಜೇಶ್ ಅವರು ಮಾಹಿತಿ ನೀಡಿದರು.

ಕೊಳಚೆ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗ ನಿಯಂತ್ರಣದ ಬಗ್ಗೆ ಜಾಗೃತಿ ವಹಿಸಲಾಗುತ್ತದೆ. ಮೈಸೂರು, ಮಂಗಳೂರು, ಹಾಸನ, ಮಂಡ್ಯ, ಚಾಮರಾಜನಗರ, ಗದಗ ಜಿಲ್ಲೆಗಳಿಂದ ವೈದ್ಯರು ಆಗಮಿಸಿದ್ದು, ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ಸುಮಾರು 342 ವೈದ್ಯರು ಆನ್‍ಲೈನ್ ಮೂಲಕ ಹೆಸರು ನೊಂದಾಯಿ ಸಿದ್ದಾರೆ ಎಂದು ಡಾ.ರಾಜೇಶ್ ಅವರು ತಿಳಿಸಿದರು. ಜಿಲ್ಲೆಯಲ್ಲಿ 27 ಆಂಬುಲೆನ್ಸ್‍ಗಳಿದ್ದು ಜೊತೆಗೆ 7 ಹೆಚ್ಚುವರಿ 108 ವಾಹನವಿದೆ ಎಂದು ಅವರು ತಿಳಿಸಿದರು.