ಮಡಿಕೇರಿ, ಆ. 26: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ನಡುವೆ ಸಂಕಷ್ಟದಲ್ಲಿರುವ ಖಾಸಗಿ ಬಸ್‍ಗಳ ಮಾಲೀಕರು ಮತ್ತು ಕಾರ್ಮಿಕರು ಜಿಲ್ಲಾಡಳಿತದ ತಾರತಮ್ಯ ನೀತಿಯಿಂದ ತೊಂದರೆಗೆ ಸಿಲುಕಿರುವದಾಗಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾಡಳಿತವು ಮಡಿಕೇರಿ-ಮೂರ್ನಾಡು ರಸ್ತೆಯಲ್ಲಿ ಖಾಸಗಿ ಬಸ್ ಸಂಚಾರಕ್ಕೆ ತಡೆಯೊಡ್ಡಿ, ಸರಕಾರಿ ಬಸ್‍ಗಳಿಗೆ ಮಾತ್ರ ಅವಕಾಶ ನೀಡಿರುವದಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಮೂರ್ನಾಡು ರಸ್ತೆಯು ಮೇಕೇರಿ ಬಳಿ ಕುಸಿದಿರುವ ನೆಪದಲ್ಲಿ, ಮೇಕೇರಿಯಲ್ಲೇ ಖಾಸಗಿ ಬಸ್‍ಗಳನ್ನು ತಡೆಯಲಾಗುತ್ತಿದೆ. ಅಲ್ಲಿಂದ ಮುಂದಕ್ಕೆ ಪ್ರಯಾಣಿಕರು ಸರಕಾರಿ ಬಸ್ ಹಾಗೂ ಇತರ ವಾಹನಗಳಲ್ಲಿ ತೆರಳುತ್ತಿದ್ದಾರೆ. ಪರಿಣಾಮ ವೀರಾಜಪೇಟೆ ಹಾಗೂ ನಾಪೋಕ್ಲು, ಭಾಗಮಂಡಲ ಮುಂತಾದೆಡೆಗಳಿಂದ ಜನ ಖಾಸಗಿ ಬಸ್‍ಗಳನ್ನು ಮೇಕೇರಿ ತನಕ ಏರದೇ, ನೇರವಾಗಿ ಸರಕಾರಿ ಬಸ್‍ಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಬಸ್‍ಗಳ ಸಂಚಾರಕ್ಕೆ ಜಿಲ್ಲಾ ಕೇಂದ್ರದಲ್ಲಿ ತೊಂದರೆಯ ಕಾರಣ ಮತ್ತಷ್ಟು ಸಮಸ್ಯೆಯಲ್ಲಿ ಸಿಲುಕಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಮೂರ್ನಾಡು ಹಾಗೂ ಮಂಗಳೂರು ಮಾರ್ಗದಲ್ಲಿ ಹಾನಿಗೊಂಡಿರುವ ಸ್ಥಳಗಳನ್ನು ಸರಿಪಡಿಸಿ ಎಂದಿನಂತೆ ಖಾಸಗಿ ಬಸ್‍ಗಳ ಸಂಚಾರಕ್ಕೆ ಅನುಮತಿ ಮಾಡಿಕೊಡದಿದ್ದರೆ, ಅನಿವಾರ್ಯ ವಾಗಿ ಪ್ರತಿಭಟನೆಗೆ ಇಳಿಯಬೇಕಾ ದೀತು ಎಂದು ರಮೇಶ್ ಜೋಯಪ್ಪ ಸುಳಿವು ನೀಡಿದ್ದಾರೆ.