ಮಡಿಕೇರಿ, ಆ. 25 : ಪ್ರಕೃತಿ ವಿಕೋಪದಿಂದ ಬದುಕನ್ನು ಕಳೆದು ಕೊಂಡಿರುವ ಕೊಡಗಿನ ನಿರಾಶ್ರಿತರಿಗೆ ಜಿಲ್ಲೆಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಿ ಹಂಚಿಕೆ ಮಾಡಬೇಕೆಂದು ಕಾಲೂರು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಅಯ್ಯಲಪಂಡ ಮಾದಪ್ಪ ಪ್ರಕೃತಿ ವಿಕೋಪದಿಂದಾಗಿ ಕಾಲೂರು, ಮೊಣ್ಣಂಗೇರಿ, ಹೆಮ್ಮೆತ್ತಾಳು, ಕಾಂಡನಕೊಲ್ಲಿ, ಮೂವತೊಕ್ಲು, ಹಮ್ಮಿಯಾಲ, ಹಚ್ಚಿನಾಡು ಗ್ರಾಮಗಳು ಕಷ್ಟ, ನಷ್ಟದಲ್ಲಿ ಮುಳುಗಿದ್ದು, 1-2 ಸೆಂಟು ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸಾಧ್ಯವಾಗುವದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕೆಲವು ಬಂಡವಾಳ ಶಾಹಿಗಳ ತೋಟಗಳಲ್ಲಿ ಒತ್ತುವರಿ ಗೊಂಡಿರುವ ಪೈಸಾರಿ ಜಾಗವನ್ನು ಗುರುತಿಸಿ ತಲಾ ಮೂರು ಎಕರೆ ಜಾಗವನ್ನು ಗುರುತಿಸಿ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿದರು.
ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಸುವಾಸನೆ ಭರಿತ ಹುಲ್ಲು ಬೆಳೆಸಲು ಸರಕಾರದಿಂದ 3000 ಎಕರೆ ಜಮೀನನ್ನು ನೀಡಲಾಗಿದ್ದು, ಇದನ್ನು ಸರಕಾರ ವಶಪಡಿಸಿಕೊಂಡಿದೆ. ಈ ಜಮೀನನ್ನು ನಿರಾಶ್ರಿತರಿಗೆ ಹಂಚುವಂತೆ ಮನವಿ ಮಾಡಿದರು.
ಮತ್ತೊಬ್ಬ ಗ್ರಾಮಸ್ಥ ಅಯ್ಯಲಪಂಡ ಸಿ.ಮಂದಣ್ಣ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.
ನಿರಾಶ್ರಿತರಿಗೆ ಬರುವ ಸಾಮಗ್ರಿಗಳನ್ನು ಅರ್ಹರಿಗೆ ಹಂಚಿಕೆ ಮಾಡದೆ ಅವ್ಯವಹಾರ ನಡೆಸುತ್ತಿರು ವದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದ ಅವರು ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೂರು ಗ್ರಾಮಸ್ಥರಾದ ಎಸ್.ಎಂ.ಬೋಪಯ್ಯ, ಭೀಮಯ್ಯ, ಕಾಳಪ್ಪ ಹಾಗೂ ಎ.ಎ.ಪೊನ್ನಪ್ಪ ಉಪಸ್ಥಿತರಿದ್ದರು.