ಸೋಮವಾರಪೇಟೆ, ಆ. 25: ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ನಷ್ಟವಾಗಿದ್ದು, ಕಾರ್ಮಿಕರು ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಆದರೆ, ಸಾಲ ಮರುಪಾವತಿಸುವಂತೆ ಸಂಘ ಸಂಸ್ಥೆಗಳು ಒತ್ತಡ ಹೇರುತ್ತಿದ್ದಾರೆ ಎಂದು ಭಾರತೀಯ ಯುವಕ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಜಿಲ್ಲೆ ನಲುಗಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ನೆಲಕಚ್ಚಿದೆ. ಇದರಿಂದಾಗಿ ಕೃಷಿ ಕಾರ್ಮಿಕರೂ ಸಹ ಕೆಲಸ ಇಲ್ಲದೆ ಜೀವನ ನಿರ್ವಹಣೆಗಾಗಿ ಪರದಾಡುತ್ತಿ ದ್ದಾರೆ. ವಾರದ ಕಂತಿನ ಆಧಾರದಲ್ಲಿ ಸಾಲ ಪಡೆದಿರುವ ಕೃಷಿ ಕಾರ್ಮಿಕರು ಕಳೆದ ಕೆಲವು ವಾರಗಳಿಂದ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಕೆಲವು ಸಂಘ-ಸಂಸ್ಥೆಗಳು ಕಾರ್ಮಿಕರ ಮೇಲೆ ಒತ್ತಡ ಹೇರಿ ಸಾಲ ವಸೂಲಾತಿಗೆ ಮುಂದಾಗಿದ್ದು, ಕೆಲವು ವಾರಗಳ ಕಾಲಾವಕಾಶ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ತಹಶೀಲ್ದಾರ್ ಮಹೇಶ್ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭ ಸಂಘದ ಪದಾಧಿಕಾರಿ ಗಳಾದ ಶ್ರೀಕಾಂತ್, ಆರ್. ಚಂದ್ರಶೇಖರ, ರೀಮಾ, ಲಕ್ಷ್ಮೀ, ಸರೋಜ ಮತ್ತಿತರರು ಇದ್ದರು.