ಕುಶಾಲನಗರ, ಆ. 24: ಕುಶಾಲನಗರ ಪಟ್ಟಣದಲ್ಲಿ ನೆರೆ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಉಂಟಾಗಿರುವ ಹಾನಿಯ ಅಂದಾಜು ಪಟ್ಟಿ ತಯಾರಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೊಡಗು ಜಿಲ್ಲಾ ವಿಶೇಷ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ವಿವಿಧ ಬಡಾವಣೆಗಳ ಮನೆಗಳಿಗೆ ಭೇಟಿ ನೀಡಿ ಅಲ್ಲಿನ ಮನೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.

ಕುಶಾಲನಗರದಲ್ಲಿ ಈಗಾಗಲೆ 250 ಕ್ಕೂ ಅಧಿಕ ಪೌರಕಾರ್ಮಿಕರು ಕಾರ್ಯನಿರತರಾಗಿದ್ದು ಸ್ವಚ್ಛತಾ ಕಾರ್ಯ ಮುಂದುವರೆದಿದೆ. ನೆರೆಯ ಕೊಪ್ಪ ಗ್ರಾಮದ ಸ್ವಚ್ಛತಾ ಕಾರ್ಯ ಕೂಡ ಇದೇ ತಂಡದ ಮೂಲಕ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿಗಳು ಕೊಪ್ಪ ಗ್ರಾಮದ ಮುಳುಗಡೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಗ್ರಾಮದ ಸ್ವಚ್ಛತಾ ಕಾರ್ಯ ನಡೆಸಲು ಕುಶಾಲನಗರದಿಂದ 20 ಮಂದಿ ಪೌರಕಾರ್ಮಿಕರನ್ನು ನಿಯೋಜಿಸುವಂತೆ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರಿಗೆ ನಿರ್ದೇಶನ ನೀಡಿದರು. ಕುಶಾಲನಗರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸ್ಥಳೀಯ ಆಡಳಿತದಿಂದ ನಡೆದ ರಕ್ಷಣಾ ಕಾರ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಕಂದಾಯಾಧಿಕಾರಿ ನಂದಕುಮಾರ್ ಮತ್ತಿತರ ಇಲಾಖಾ ಅಧಿಕಾರಿಗಳು ಇದ್ದರು.