ಮಡಿಕೇರಿ, ಆ. 24: ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಜಿ.ಪಂ. ಕ್ಷೇತ್ರ ಹಾಗೂ ಗಾಳಿಬೀಡು, ಮಕ್ಕಂದೂರು, ಮದೆನಾಡು ವ್ಯಾಪ್ತಿಯಲ್ಲಿ ತೊಂದರೆಗೆ ಸಿಲುಕಿ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳು; ಭವಿಷ್ಯದಲ್ಲಿ ಸೂರು ಕಂಡುಕೊಳ್ಳಲು ಸರಕಾರ ಮತ್ತು ಸಮಾಜಗಳಿಂದ ನೆರವು ಕಲ್ಪಿಸಿಕೊಡಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಭರವಸೆ ನೀಡಿದ್ದಾರೆ.

ಮದೆ ಗ್ರಾ.ಪಂ. ವ್ಯಾಪ್ತಿಯ ನೂರಾರು ಕುಟುಂಬಗಳು ನೆಲೆ ಕಳೆದುಕೊಂಡು ಜಿಲ್ಲೆಯ ಗಡಿಯಲ್ಲಿರುವ ಸಂಪಾಜೆ, ತೆಕ್ಕಿಲ, ಕಲ್ಲುಗುಂಡಿಗಳಲ್ಲಿ ಸಾಮೂಹಿಕ ಆಸರೆ ಪಡೆದಿರುವ ಸ್ಥಳಗಳಿಗೆ ನಿನ್ನೆ ರಾತ್ರಿ ಖುದ್ದು ಭೇಟಿ ನೀಡಿದ ಅವರು, ಮಳೆ ಕಮ್ಮಿಯಾಗಿ ಮನೆಗಳಿಗೆ ವಾಪಸ್ಸಾದರೂ ಮುಂದಿನ ಒಂದು ತಿಂಗಳಿಗೆ ಸಾಧ್ಯವಿರುವ ಪಡಿತರ ವಸ್ತುಗಳನ್ನು ಕಲ್ಪಿಸಿಕೊಡಲಾಗುವದು ಎಂದು ಆತ್ಮವಿಶ್ವಾಸ ತುಂಬಿದರು.

ಬಳಸು ಮಾರ್ಗ : ಮಡಿಕೇರಿಯಿಂದ ಕೇವಲ ಹತ್ತಾರು ಕಿ.ಮೀ. ದೂರದ ಜೋಡುಪಾಲದಲ್ಲಿ ನಾಲ್ವರು ಮೃತರಾಗಿರುವ ಸ್ಥಳಕ್ಕೆ 130 ಕಿ.ಮೀ. ದೂರದ ಬಳಸುದಾರಿಯಲ್ಲಿ ಶಾಸಕರು, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಗಾಳಿಬೀಡು ಗ್ರಾ.ಪಂ. ಸದಸ್ಯ ಎ.ಪಿ. ಧನಂಜಯ್, ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರಕಳಗಿ ಸಹಿತ ತೆರಳಿ, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಅಲ್ಲಲ್ಲಿ ಅಪಾಯ: ಈಗಾಗಲೇ ಅಪಾಯದಂಚಿನಲ್ಲಿರುವ ಮಂಗಳೂರು ರಸ್ತೆಯಲ್ಲಿ, ಜನರಲ್ ತಿಮ್ಮಯ್ಯ ವೃತ್ತದಿಂದ ಸಂಪಾಜೆಯ ತನಕ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಪರಿಣಾಮ ನಗರದಿಂದ ಮೂರ್ನಾಡು ಮಾರ್ಗವಾಗಿ ಕೆ.ಜಿ. ಬೋಪಯ್ಯ ತಂಡ ಸಂತ್ರಸ್ತರ ಭೇಟಿಗೆ ಪಯಣಿಸಿತು.

ಇಲ್ಲಿನ ಮೂರ್ನಾಡು ರಸ್ತೆಯ ಅಲ್ಲಲ್ಲಿ ಬೆಟ್ಟಸಾಲು ಒಂದೆಡೆ ಕುಸಿದು, ರಸ್ತೆಯನ್ನು ಮಣ್ಣು ಆಕ್ರಮಿಸಿಕೊಂಡಿದ್ದರೆ, ಇನ್ನೊಂದೆಡೆ ರಸ್ತೆಯೇ ಕೆಲವೆಡೆ ಕುಸಿದು ಭಾರೀ ವಾಹನಗಳ ಓಡಾಟಕ್ಕೆ ಅಪಾಯ ಗೋಚರಿಸತೊಡಗಿದೆ. ಅಂತೂ ಮೇಕೇರಿಯಿಂದ ಕಾಟಕೇರಿ ಸಂಪರ್ಕದೊಂದಿಗೆ ಭಾಗಮಂಡಲ, ಕರಿಕೆ, ಪಾಣತ್ತೂರು ಮುಖಾಂತರ ಕೇರಳದ ಕಲ್ಲಪಲ್ಲಿ ಮೂಲಕ ಸುಳ್ಯ ತಲಪಿ, ಕಲ್ಲುಗುಂಡಿ ಹಾಗೂ ಸಂಪಾಜೆಯಲ್ಲಿ ಆಸರೆ ಪಡೆದಿರುವ ಗಡಿಗ್ರಾಮಗಳ ಸಂತ್ರಸ್ತರನ್ನು ಸಂಪರ್ಕಿಸಬೇಕಾಯಿತು.

ಸೂರಿಗೆ ಅಳಲು : ಜನಪ್ರತಿನಿಧಿಗಳ ಬಳಿ ತಮ್ಮ ನೋವನ್ನು ತೋಡಿಕೊಂಡ ಮಂದಿ, ಎಲ್ಲಿಯಾದರೂ ಬದಲಿ ಸೂರಿನ ಭಾಗ್ಯ ಕಲ್ಪಿಸುವಂತೆ ಅಂಗಾಲಾಚಿದರು. ಅಲ್ಲದೆ ಇಂದಿನಿಂದ ಶಾಲೆಗಳು ಆರಂಭಗೊಳ್ಳಲಿರುವ ಕಾರಣ ಮಕ್ಕಳಿಗೆ ಪಠ್ಯಕ್ರಮ, ಸಮವಸ್ತ್ರ, ಬಸ್ ಸೌಲಭ್ಯಕ್ಕೆ ಅನುವು ಮಾಡಿಕೊಡುವಂತೆ ಗಮನ ಸೆಳೆದರು.

ನೆಲೆಯ ಭರವಸೆ : ನೊಂದವರ ಅಳಲು ಆಲಿಸಿದ ಶಾಸಕ ಕೆ.ಜಿ. ಬೋಪಯ್ಯ, ಈಗಾಗಲೇ ಮುಖ್ಯಮಂತ್ರಿ ಸಹಿತ ಇತರ ಸಚಿವರು, ಕೇಂದ್ರ ಸಚಿವರುಗಳೊಂದಿಗೆ ತಾವು ಮಾತನಾಡಿದ್ದು, ಭವಿಷ್ಯದಲ್ಲಿ ಪರ್ಯಾಯ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿಕೊಡಲಾಗುವದು ಎಂದು ಭರವಸೆಯಿತ್ತರು.