ಮಡಿಕೇರಿ, ಆ. 24: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ನಮ್ಮ ಮನೆ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡಿದ್ದು, ಸರ್ಕಾರದಿಂದ ಪ್ರಾರಂಭಿಸಿರುವ ಪರಿಹಾರ ಕೇಂದ್ರದಲ್ಲಿ ಊಟೋಪಹಾರ ಹಾಗೂ ಪರಿಹಾರ ಸಾಮಗ್ರಿಗಳು ಸಮರ್ಪಕವಾಗಿ ದೊರೆಯುತ್ತಿದ್ದು, ಆತಂಕದಲ್ಲಿದ್ದ ಕುಟುಂಬಕ್ಕೆ ಭರವಸೆಯ ಹೊಂಗಿರಣ ಮೂಡಿಸಿದೆ. ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಮನು ಎಂಬ ಮಹಿಳೆ ಹೇಳಿಕೊಂಡ ಮನದಾಳದ ಮಾತುಗಳು.

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಮಡಿಕೇರಿ, ಕುಶಾಲನಗರ, ಮುಳ್ಳುಸೋಗೆ, ಕೂಡಿಗೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಾವಿರಾರು ಜನರು ತಮ್ಮ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕುಶಾಲನಗರವೂ ಒಂದಾಗಿದ್ದು, ಸಂತ್ರಸ್ತರಿಗಾಗಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಇದರ ಜೊತೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ನೆರವಿನ ಮಹಾಪೂರವನ್ನೇ ಹರಿಸಿದ್ದು, ಇವುಗಳನ್ನು ಸ್ವೀಕರಿಸಿ, ವ್ಯವಸ್ಥಿತವಾಗಿ ನಿಜವಾದ ಸಂತ್ರಸ್ತರಿಗೆ ವಿತರಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ.

ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸುವ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಸಂತ್ರಸ್ತರಾಗಿರುವ ವಿಶ್ವನಾಥ್ ಎಂಬವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಇಂತಹ ಭಾರೀ ಮಳೆ ಸುರಿದಿರುವದನ್ನು ನಾನು ಕಂಡಿಲ್ಲ. ಈ ಬಾರಿ ಪ್ರಕೃತಿಯ ಅವಕೃಪೆಗೆ ನಾವು ಒಳಗಾಗಬೇಕಾಯಿತು. ತೀವ್ರ ಅತಿವೃಷ್ಠಿಯಿಂದಾಗಿ ನಾವು ತೊಂದರೆಗೆ ಒಳಗಾಗಿದ್ದೇವೆ. ಆದರೆ ನಮ್ಮ ಕಣ್ಣೀರು ಒರೆಸಲು ಇಡೀ ರಾಜ್ಯದ ಜನ ಒಂದಾಗಿ, ನೆರವಿನ ಮಹಾಪೂರವನ್ನೇ ಹರಿಸಿರುವದು ಸಂತಸದ ಸಂಗತಿಯಾಗಿದೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗು ಜಿಲ್ಲೆಗೆ ಬಂದು, ನಮ್ಮ ನೋವನ್ನು ಆಲಿಸಿದ್ದಾರೆ. ಅಲ್ಲದೆ ಪರಿಹಾರ ದೊರಕಿಸುವ ಮಾತುಗಳನ್ನಾಡಿದ್ದಾರೆ. ಮನೆಗಳನ್ನು ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಭರವಸೆ ನೀಡಿದ್ದಾರೆ. ಇದು ಹೊಸದಾಗಿ ನಮ್ಮ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಸುಮಾರು 250 ರಿಂದ 300 ಜನರು ಆಶ್ರಯವನ್ನು ಪಡೆದಿದ್ದು, ಇವರಿಗೆ ಬೆಳಗಿನ ಉಪಹಾರಕ್ಕಾಗಿ ಇಡ್ಲಿ, ಸಾಂಬಾರ್, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಹಾರ ನೀಡಲಾಗುತ್ತಿದೆ. ಪರಿಹಾರ ಕೇಂದ್ರಕ್ಕೆ ಹಲವು ಸಂಘಟನೆಗಳು, ಸ್ವಯಂ ಪ್ರೇರಿತರಾಗಿ ಆಹಾರ, ತರಕಾರಿ, ಬ್ರೆಡ್ ಇತ್ಯಾದಿಗಳನ್ನು ಪೂರೈಸುತ್ತಿರುವದು, ಕನ್ನಡಿಗರ ವಿಶಾಲ ಹೃದಯಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅವರು ಹೇಳುವಂತೆ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗಾಗಿ ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅನ್ನ ಸಾಂಬಾರ್, ರೈಸ್ ಬಾತ್ ಸೇರಿದಂತೆ ವಿವಿಧ ಅಡುಗೆ ಊಟ ಬಡಿಸಲಾಗುತ್ತಿದೆ. ಊಟ ಪೂರೈಕೆಗಾಗಿ ಅಗತ್ಯ ಸಿಬ್ಬಂದಿಗಳನ್ನೂ ಕೂಡ ನೇಮಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು, ರಾತ್ರಿ ತಂಗಲು ಕೂಡ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ಧ ನೀರಿನ ಬಾಟಲ್ ಪೂರೈಕೆ ವ್ಯವಸ್ಥೆಯೂ ಇದೆ. ಪರಿಹಾರ ಕೇಂದ್ರದಲ್ಲಿ ಅರ್ಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳಾದ ಹೊಸ ಉಡುಪುಗಳು, ತಟ್ಟೆ, ಬಿಸ್ಕೆಟ್, ಮಕ್ಕಳ ಉಡುಪುಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಬಹಳಷ್ಟು ಸಂತ್ರಸ್ತರು ಊಟ, ಉಪಹಾರದ ಸಮಯಕ್ಕೆ ಪರಿಹಾರ ಕೇಂದ್ರಕ್ಕೆ ಬಂದು ಊಟ ಉಪಹಾರ ಸೇವಿಸಿ, ಪುನಃ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿರುವುದೂ ಕಂಡುಬಂದಿದೆ. ಪರಿಹಾರ ಕೇಂದ್ರದ ಆವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ ಎಂದರು.