ಸೋಮವಾರಪೇಟೆ, ಆ. 24: ತಾಲೂಕಿನ ವಿವಿಧೆಡೆ ಸಂತ್ರಸ್ತರಿಗೆ ಆರಂಭಿಸಿರುವ ನಿರಾಶ್ರಿತರ ಕೇಂದ್ರಗಳಿಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಸ್ವಾಮಿ ಬೋಧಸ್ವರೂಪಾನಂದ ಅವರ ನೇತೃತ್ವದಲ್ಲಿ ಒಂದು ಟ್ರಕ್‍ನಲ್ಲಿ ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳನ್ನು ಮಾದಾಪುರ, ಕಿರಗಂದೂರು,ಕಾಜೂರು ಮತ್ತು ಸೋಮವಾರಪೇಟೆ ಸುತ್ತಮುತ್ತ ಆರಂಭಿಸಿರುವ ಕೇಂದ್ರಗಳಿಗೆ ವಿತರಿಸಿದರು. ಈ ಸಂದರ್ಭ ಕೊಡಗು ಲೇಖಕರ ಬಳಗದ ಅಧ್ಯಕ್ಷ ಕೇಶವ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರಗಳಿಗೆ ಜೀವಿಜಯ ಭೇಟಿ: ಇಲ್ಲಿನ ಕೊಡವ ಸಮಾಜದಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರಕ್ಕೆ ಮಾಜಿ ಸಚಿವ ಬಿ.ಎ.ಜೀವಿಜಯ ಭೇಟಿ ನೀಡಿದರು. ತಾಲೂಕಿನ ಗರ್ವಾಲೆ, ಸೂರ್ಲಬ್ಬಿ, ಮಂಕ್ಯ, ಮುಕ್ಕೋಡ್ಲು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರೊಂದಿಗೆ ಮಾತನಾಡಿದರು.

ಮಾದಾಪುರ, ಕಿರಗಂದೂರು, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಭೂಕುಸಿತ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿದೆ. ಅಲ್ಲದೇ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳೂ ಕೂಡ ಸರಿಪಡಿಸಲಾಗದ ಸ್ಥಿತಿಯನ್ನು ತಲಪಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರೊಂದಿಗೆ ಚರ್ಚಿಸಿ, ಸಮಗ್ರ ಚಿತ್ರಣವನ್ನು ವಿವರಿಸಿದ್ದೇನೆ. ಕೊಡಗಿನ ಕಷ್ಟಕ್ಕೆ ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದೆ ಎಂದರು.

ಈ ಸಂದರ್ಭ ಮಡಿಕೇರಿ ಕ್ಷೇತ್ರ ಜೆಡಿಎಸ್ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಆರ್‍ಎಂಸಿ ಸದಸ್ಯ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.