ಮಡಿಕೇರಿ, ಆ. 24: ಪ್ರಾಕೃತಿಕ ವಿಕೋಪದಿಂದ ನಲುಗುತ್ತಿರುವ ಕೊಡಗು ಜಿಲ್ಲೆಯ ಸಂಕಷ್ಟ ನಿವಾರಣೆಗೆ ರಾಜ್ಯ ಸರಕಾರದ ಕೋರಿಕೆ ಮೇರೆಗೆ ಕೇಂದ್ರವು ತಕ್ಷಣವೇ ಸ್ಪಂದಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಅಲ್ಲದೆ ತಕ್ಷಣವೇ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮಗಳಿಂದ ರೂ. 7 ಕೋಟಿ ಹಾಗೂ ತನ್ನ ಸಂಸತ್ ನಿಧಿಯಿಂದ ರೂ. 1 ಕೋಟಿ ಸೇರಿದಂತೆ ಒಟ್ಟು ರೂ. 8 ಕೋಟಿ ಪರಿಹಾರ ನಿಧಿ ಬಿಡುಗಡೆ ಗೊಳಿಸುವದಾಗಿ ಘೋಷಿಸಿದರು.

ಜಿಲ್ಲೆಯ ಜನರ ಭವಿಷ್ಯ ರೂಪಿಸಲು ಅಗತ್ಯವಾದ ನೆರವನ್ನು ಕಲ್ಪಿಸಲಾಗುತ್ತದೆ. ಜಿಲ್ಲಾಡಳಿತ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ನಷ್ಟದ ಪೂರ್ಣ ಪ್ರಮಾಣದ ವರದಿಯನ್ನು ರಾಜ್ಯ ಸರಕಾರದ ಮೂಲಕ ಸಲ್ಲಿಸಿದ ಬಳಿಕ ಈ ಬಗ್ಗೆ ಕೇಂದ್ರವು ಅಧಿಕೃತವಾಗಿ ಪರಿಹಾರ ನಿಧಿಯನ್ನು ಒದಗಿಸಲು ಸಿದ್ಧವಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಮತ್ತಿತರ ಸಂಬಂಧಪಟ್ಟ ಸಚಿವರುಗಳ ಗಮನಕ್ಕೆ ತಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಗೊಂಡ ತನಗೂ ಕೂಡ ಜವಾಬ್ದಾರಿಕೆಯಿದ್ದು, ಇದನ್ನು ನಿರ್ವಹಿಸುತ್ತಿರುವದಾಗಿ ಅವರು ತಿಳಿಸಿದರು.

ಸೇನಾಧಿಕಾರಿಗಳನ್ನು, ಯೋಧರನ್ನು ದೇಶಕ್ಕೆ ನೀಡಿರುವ ಕೊಡಗು ಜಿಲ್ಲೆಗೆ ಸಂಕಷ್ಟ ಬಂದಾಗ ಕೇಂದ್ರ ಸರಕಾರವು ಸ್ಪಂದಿಸಿದೆ; ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ಸೇನೆಯನ್ನು ನಿಯೋಜಿಸಲು ಆಗಸ್ಟ್ 18 ರಂದು ರಾಜ್ಯದಿಂದ ಕೇಂದ್ರಕ್ಕೆ ಮನವಿ ಬಂದ ಕೂಡಲೇ ಎರಡು ಉಪ ತುಕಡಿಗಳನ್ನು ಮುಕ್ಕೋಡ್ಲು ಹಾಗೂ ಕಾಲೂರು ಭಾಗಗಳಿಗೆ ನಿಯೋಜಿಸಲಾಯಿತು. ಒಂದು ತುಕಡಿಯು ಎರಡು ಹಿರಿಯ ಅಧಿಕಾರಿಗಳು, ನಾಲ್ಕು ಕಿರಿಯ ಅಧಿಕಾರಿಗಳು, (ಜೆಸಿಓ) 70 ಸೈನಿಕರು ಹಾಗೂ ಇತರ ಅಧಿಕಾರಿಗಳನ್ನು ಹೊಂದಿರುತ್ತದೆ. ಅಲ್ಲದೆ, ರಕ್ಷಣಾ ಕಾರ್ಯ ಕೈಗೊಳ್ಳಲು ತಾಂತ್ರಿಕ ಪರಿಣತಿ ಹೊಂದಿರುವ ಒಂದು ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಈ ತಂಡದಲ್ಲಿ ಓರ್ವ ಹಿರಿಯ ಅಧಿಕಾರಿ, ನಾಲ್ವರು ಕಿರಿಯ ಅಧಿಕಾರಿಗಳು, 34 ಇತರ ಅಧಿಕಾರಿಗಳು, 4 ದೋಣಿ ರಕ್ಷಣಾ ತಂಡಗಳೊಂದಿಗೆ 4 ಮೋಟಾರು ಬೋಟ್ ಹಾಗೂ ಇತರ ರಕ್ಷಣಾ ಸಾಮಗ್ರಿಗಳನ್ನು ನಿಯೋಜಿಸಲಾಗಿದೆ.

ಭಾರತೀಯ ವಾಯುಸೇನೆ, 16 ಸುತ್ತುಗಳ ನಿರಂತರ 10 ಗಂಟೆಗಳ ಹಾರಾಟವನ್ನು ಎಂಐ-17 ವಿಮಾನದ ಮೂಲಕ ಮಾಡಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಹೆಚ್ಚಿನ ರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

ಭಾರತೀಯ ಸೇನೆಯು ಮುಕ್ಕೋಡ್ಲು ಹಾಗೂ ಕಾಲೂರುಗಳಲ್ಲಿ ಎರಡು ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದೆ, ಅಲ್ಲದೆ, ಗಡಿ ರಸ್ತೆ ಸಂಸ್ಥೆಯ ಒಂದು ತಾಂತ್ರಿಕ ತಂಡವನ್ನು ಕೊಡಗು ಜಿಲ್ಲೆಯಲ್ಲಿ ಹಾನಿಗೊಳಗಾದ ರಸ್ತೆಗಳ ಪುನರ್ ನಿರ್ಮಾಣಕ್ಕೆ ನಿಯೋಜಿಸಲಾಗಿದೆ.

ಅತಿವೃಷ್ಟಿ ಪ್ರವಾಹದ ಸಂದರ್ಭ ಮೂರು ದಿನಗಳಲ್ಲಿ 504 ಮಂದಿಯನ್ನು ರಕ್ಷಣಾ ಪಡೆಗಳು ಪ್ರಾಣಾಪಾಯದಿಂದ ಪಾರು ಮಾಡಿವೆ. ತಾ. 18 ರಂದು 160 ಮಂದಿ, ತಾ. 19 ರಂದು 199 ಮಂದಿ, ತಾ. 20 ರಂದು 145 ಮಂದಿಯನ್ನು ರಕ್ಷಿಸಲಾಗಿದ್ದು, ಬಳಿಕ ರಾಜ್ಯ ಸರಕಾರದಿಂದ ರಕ್ಷಣಾ ಕಾರ್ಯ ಕೈಗೊಳ್ಳುವ ಬಗ್ಗೆ ಯಾವದೇ ಮನವಿಗಳು ಬಂದಿಲ್ಲ ವೆಂದು ಸಚಿವರು ಮಾಹಿತಿಯಿತ್ತರು.

ಕಾರ್ಯಪಡೆ ರಚನೆ : ಕೊಡಗು ಜಿಲ್ಲೆಗೆ ಎದುರಾಗಿರುವ ಸಂಕಷ್ಟ ನಿವಾರಣೆಗೆ ಶಾಶ್ವತವಾದ ಪರಿಹಾರ ರೂಪಿಸಬೇಕಾಗಿದೆ. ಈಗಿನ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಮತ್ತು ಜಿಲ್ಲಾ ಆಡಳಿತ ಸೇರಿದಂತೆ ಕೇಂದ್ರವನ್ನು ಒಳಗೊಂಡು ತುರ್ತು ಕಾರ್ಯಪಡೆ ರಚಿಸುವ ಅವಶ್ಯಕತೆ ಯಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸಾಕ್ಷ್ಯ ಚಿತ್ರ ಸಹಿತ ಸಚಿವರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್, ಜಿಲ್ಲೆಯು ಯಥಾಸ್ಥಿತಿಗೆ ಮರಳಲು ಕೇಂದ್ರದಿಂದ ಹೆಚ್ಚಿನ ನೆರವು ಅಗತ್ಯವಿದೆ ಎಂದು ಮನವಿ ಮಾಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಈಗಿನ ದುಸ್ಥಿತಿಯನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಹಾನಿಗೀಡಾದ

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸಾಕ್ಷ್ಯ ಚಿತ್ರ ಸಹಿತ ಸಚಿವರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್, ಜಿಲ್ಲೆಯು ಯಥಾಸ್ಥಿತಿಗೆ ಮರಳಲು ಕೇಂದ್ರದಿಂದ ಹೆಚ್ಚಿನ ನೆರವು ಅಗತ್ಯವಿದೆ ಎಂದು ಮನವಿ ಮಾಡಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಈಗಿನ ದುಸ್ಥಿತಿಯನ್ನು ಗಮನಿಸಿದರೆ, ಜಿಲ್ಲೆಯಲ್ಲಿ ಹಾನಿಗೀಡಾದ

(ಮೊದಲ ಪುಟದಿಂದ) ಪ್ರದೇಶಗಳ ಪುನರ್‍ನಿರ್ಮಾಣಕ್ಕೆ ರೂ. 10 ಸಾವಿರ ಕೋಟಿ ನೆರವಿನ ಅಗತ್ಯವಿದೆಯೆಂದು ಮನವಿ ಮಾಡಿದರು. ಶಾಸಕದ್ವಯರಾದ ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಕೂಡ ಧ್ವನಿಗೂಡಿಸಿ ಕೇಂದ್ರದಿಂದ ಜಿಲ್ಲೆಯ ಸಂಕಷ್ಟ ನಿವಾರಣೆಗೆ ಹೆಚ್ಚಿನ ಸಹಾಯ ಕೋರಿದರು. ಶಾಸಕ ಅಪ್ಪಚ್ಚುರಂಜನ್ ಮುಂದುವರಿದು, ಕೊಡಗನ್ನು ರಾಷ್ಟ್ರೀಯ ವಿಕೋಪಕ್ಕೆ ತುತ್ತಾದ ಜಿಲ್ಲೆಯೆಂದು ಘೋಷಿಸುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೋರಿದರಲ್ಲದೆ ಲಿಖಿತ ಮನವಿ ಸಲ್ಲಿಸಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್ ಸೇರಿದಂತೆ ಅನೇಕ ಅಧಿಕಾರಿಗಳು, ಸೇನಾ ವರಿಷ್ಠರು ಹಾಜರಿದ್ದರು.

ನಷ್ಟ ಸಮೀಕ್ಷೆಗೆ ಕೇಂದ್ರದಿಂದ ತಂಡ

ಅತಿವೃಷ್ಟಿಯಿಂದಾಗಿ ಕಾಫಿ, ಕರಿಮೆಣಸು ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಈ ಸಂಬಂಧ ಕೇಂದ್ರದಿಂದ ವಿಶೇಷ ತಂಡ ಆಗಮಿಸಿ ಸಮೀಕ್ಷೆ ನಡೆಸಲಿದೆ, ವರದಿ ನೀಡಿದ ನಂತರ ಕಾಫಿ ಮತ್ತು ಕರಿಮೆಣಸು ಬೆಳೆಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗುವದು ಎಂದು ಅವರು ಪ್ರಕಟಿಸಿದರು.

ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ, ರಾಜ್ಯ ಮತ್ತು ಗ್ರಾಮೀಣ ರಸ್ತೆಗಳು ಹಾನಿಯಾಗಿದ್ದು ಈ ಸಂಬಂಧ ರಾಷ್ಟ್ರೀಯ ವಿಪತ್ತು ನಿಧಿಗೆ ವರದಿ ನೀಡಲಾಗುವದು. ಜೊತೆಗೆ ಗೃಹ ಸಚಿವರು ಹಾಗೂ ಭೂಸಾರಿಗೆ ಸಚಿವರ ಗಮನಕ್ಕೆ ತರಲಾಗುವದು ಎಂದು ಅವರು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮಾತನಾಡಿ , ಅತಿವೃಷ್ಟಿಯಿಂದಾಗಿ ಅಪಾರ ನಷ್ಟ ಉಂಟಾಗಿದ್ದು, ಆಗಿರುವ ನಷ್ಟಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ 34 ಗ್ರಾಮಗಳು ತೊಂದರೆಗೆ ಸಿಲುಕಿದ್ದು, ರಸ್ತೆಗಳ ಸಂಪರ್ಕ ಕಡಿದು ಹೋಗಿದೆ. ಕಾಫಿ ಮತ್ತು ಕರಿಮೆಣಸು ಸಂಪೂರ್ಣ ನಾಶವಾಗಿದ್ದು, 10 ಸಾವಿರ ಕೋಟಿ ರೂ ಬಿಡುಗಡೆ ಮಾಡಬೇಕೆಂದು ಅವರು ಮನವಿ ಮಾಡಿದರು.

ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಾತನಾಡಿ, ಕೊಡಗನ್ನು ರಾಷ್ಟ್ರೀಯ ವಿಪತ್ತು ಜಿಲ್ಲೆಯೆಂದು ಪರಿಗಣಿಸಿ ವಿಶೇಷ ಅನುದಾನ ನೀಡಬೇಕೆಂದು ಕೋರಿದರು.

ಸಂಸದÀ ಪ್ರತಾಪ್ ಸಿಂಹ ಮಾತನಾಡಿ ಸಂತ್ರಸ್ತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಿದ್ದಾರೆ. ಆ ನಿಟ್ಟಿನಲ್ಲಿ ಯಾರೂ ಸಹ ಆತಂಕದ ವಾತಾವರಣ ನಿರ್ಮಿಸಬಾರದು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.

ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಎರಡೂವರೆ ಸಾವಿರ ಕಿ.ಮೀ. ಗ್ರಾಮೀಣ ರಸ್ತೆ ಹಾನಿಯಾಗಿದೆ. ಹಾಗೆಯೇ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಸೂಕ್ತ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲು ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಇತ್ತೀಚಿಗೆ ಸುರಿದ ಧಾರಾಕಾರ ಮಳೆಗೆ ಹಲವರು ಸಂಕಷ್ಟ ಅನುಭವಿಸಿದ್ದು ಇವರ ರಕ್ಷಣೆಗೆ ಭಾರತೀಯ ಸೇನೆ, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ಶ್ರಮಿಸಿದ್ದಾರೆ. ಮಕ್ಕಂದೂರು, ಮುಕ್ಕೋಡ್ಲು, ಕಾಲೂರು, ಜೋಡುಪಾಲ, ದೇವಸ್ತೂರು, ಮಾದಾಪುರ, ಮತ್ತಿತ್ತರ ಕಡೆಗಳಲ್ಲಿ ಭೂಕುಸಿತ ಉಂಟಾಗಿ ಮನೆ, ಬೆಳೆ ಇತರೆ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ, ಸಂತ್ರಸ್ತರಿಗೆ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನಿಸಲಾಗಿದೆ. ಈಗಾಗಲೇ ಆಹಾರ ಮತ್ತು ಇತರ ಸಾಮಗ್ರಿಗಳು ಜಿಲ್ಲೆಗೆ ಹರಿದು ಬರುತ್ತಿದ್ದು ಆಹಾರ ಸಾಮಗ್ರಿಗಳನ್ನು ಗ್ರಾ.ಪಂ.ಮೂಲಕ ಪರಿಹಾರ ಕೇಂದ್ರಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಂತ್ರಸ್ತರಲ್ಲಿ ಧೈರ್ಯ ತುಂಬುವ ದಿಸೆಯಲ್ಲಿ ಹಲವು ಮನರಂಜನೆ, ಸಂಗೀತ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಹಾಗೆಯೇ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.