ಮಡಿಕೇರಿ, ಆ. 24: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಜಿಲ್ಲಾಕೇಂದ್ರ ಮಡಿಕೇರಿಗೆ ಭೇಟಿ ನೀಡುವದರೊಂದಿಗೆ ಇಲ್ಲಿನ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪ ಹಾಗೂ ಪೊಲೀಸ್ ಮೈತ್ರಿ ಭವನದಲ್ಲಿ ಆಸರೆ ಪಡೆದಿರುವ ಪ್ರಾಕೃತಿಕ ವಿಕೋಪ ಸಂತ್ರಸ್ತರನ್ನು ಖುದ್ದಾಗಿ ಸಂತೈಸಿದರು.
ಕೊಡಗಿಗೆ ಎದುರಾಗಿರುವ ಪರಿಸ್ಥಿತಿ ಗಮನಿಸಿದರೆ ಏನೂ ಹೇಳಲು ಆಗುತ್ತಿಲ್ಲವೆಂದು ವಿಷಾದಿಸಿದ ಸಚಿವರು, ಜಿಲ್ಲೆಯ ಜನತೆಯ ಸಂಕಷ್ಟದೊಂದಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರಕಾರದ ಎಲ್ಲಾ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಒಗ್ಗೂಡಿ ಶ್ರಮಿಸುವದಾಗಿ ಭರವಸೆ ನೀಡಿದರು.
ಉಭಯ ಕಡೆಯ ಸಂತ್ರಸ್ತರು ಹಾಗೂ ಅಂತಹವರ ಮಕ್ಕಳನ್ನು ಮತ್ತು ಗರ್ಭಿಣಿಯರು, ವೃದ್ಧೆಯರನ್ನು ವೈಯಕ್ತಿಕವಾಗಿ ಮಾತನಾಡಿಸಿ ನೋವು, ಸಂಕಟ ಆಲಿಸಿದ ಸಚಿವರು, ಎಲ್ಲಾ ರೀತಿಯ ನೆರವು ಕಲ್ಪಿಸಲು ಸ್ವಲ್ಪ ಕಾಲಾವಕಾಶ ಬೇಕಿದ್ದು, ಕ್ಷಿಪ್ರಗತಿಯಲ್ಲಿ ಪರಿಹಾರಕ್ಕೆ ಕೇಂದ್ರದಿಂದಲೂ ನೊಂದವರಿಗೆ ನೆರವು ಒದಗಿಸಲಾಗುವದು ಎಂದರು.
ನೊಂದವರಿಗೆ ಆಸರೆ, ಊಟೋಪಚಾರ, ವೈದ್ಯಕೀಯ ಚಿಕಿತ್ಸೆಯೊಂದಿಗೆ ಮಿಕ್ಕೆಲ್ಲ ನೆರವು ಸಮರ್ಪಕವಾಗಿ ಜಿಲ್ಲಾಡಳಿತದಿಂದ ಕಲ್ಪಿಸಲಾಗುವದು ಎಂದ ನಿರ್ಮಲಾ ಸೀತಾರಾಮನ್, ಪ್ರತಿಯೊಬ್ಬರು ಧೃತಿಗೆಡದೆ ಪರಿಸ್ಥಿತಿಯನ್ನು ಎದುರಿಸುವದರೊಂದಿಗೆ ಆತ್ಮವಿಶ್ವಾಸ ಉಳಿಸಿಕೊಳ್ಳುವಂತೆ ಕಳಕಳಿ ವ್ಯಕ್ತಪಡಿಸಿದರು.
ಸೇವಾಕೇಂದ್ರದ ಮಕ್ಕಳು ಅಲ್ಲಿನ ಶಿಕ್ಷಕರ ಸಲಹೆಯಂತೆ ವಿವಿಧೆಡೆ ಸಂಭವಿಸಿದ ಭೂಕುಸಿತ, ಜಲಪ್ರವಾಹ ಮತ್ತು ನೀರಿನಲ್ಲಿ ಕೊಚ್ಚಿಹೋದ ವಸ್ತುಗಳ ಬಗ್ಗೆ ಚಿತ್ರಗಳನ್ನು ಬಿಡಿಸಿ ತೋರಿಸುವ ಮೂಲಕ ಕೇಂದ್ರ ಸಚಿವರ ಗಮನ ಸೆಳೆದರು.
ಸ್ಥಳಾಂತರ ಭರವಸೆ: ಸೇವಾ ಭಾರತಿಯಿಂದ ಕಲ್ಯಾಣಮಂಟಪದಲ್ಲಿ ಆರಂಭಗೊಂಡಿರುವ ಕೇಂದ್ರವನ್ನು ಬಿಟ್ಟುಕೊಡಬೇಕಿರುವ ಕಾರಣ ಅಲ್ಲಿನ ಸಂತ್ರಸ್ತರಿಗೆ ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಈ ಸಂದರ್ಭ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಭರವಸೆ ನೀಡಿದರು.
ಸೇವಾ ಭಾರತಿ ಬಳಗದ ಪರವಾಗಿ ಕೆ.ಕೆ. ಮಹೇಶ್ ಕುಮಾರ್ ಪರಿಸ್ಥಿತಿಯ ಬಗ್ಗೆ ಸಚಿವರ ಗಮನ ಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಮಾಜೀ ಅಧ್ಯಕ್ಷ ರವಿಕುಶಾಲಪ್ಪ, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಸೇರಿದಂತೆ ಇತರ ಪ್ರಮುಖರು, ಸಂಘ- ಪರಿವಾರದ ಹಿರಿಯರು ಹಾಜರಿದ್ದರು. ಆ ಮುನ್ನ ಸಚಿವರು ಮಾದಾಪುರ ಬಳಿ ಹಟ್ಟಿಹೊಳೆ ಹೆದ್ದಾರಿ ದುರಂತದೊಂದಿಗೆ ಮನೆಗಳು ನಾಶಗೊಂಡಿರುವ ಭಯಾನಕ ದೃಶ್ಯಗಳನ್ನು ವೀಕ್ಷಿಸಿದರು.