ಮಡಿಕೇರಿ, ಆ. 24: ಪ್ರಾಕೃತಿಕ ವಿಕೋಪದಿಂದಾಗಿ ಕೊಡಗು ಜಿಲ್ಲೆ, ಅದರಲ್ಲೂ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಊಹಿಸಲಾರದಷ್ಟು ಹಾನಿಯಾಗಿದ್ದು, ಗ್ರಾಮಕ್ಕೆ ಗ್ರಾಮಗಳೇ ಕಣ್ಮರೆಯಾಗಿವೆ. ಗ್ರಾಮಗಳಲ್ಲಿದ್ದವರು ಗ್ರಾಮ ತೊರೆದಿದ್ದು, ಪರಿಹಾರ ಕೇಂದ್ರ, ನೆಂಟರಿಷ್ಟರ, ಸ್ನೇಹಿತರ ಆಶ್ರಯದಲ್ಲಿದ್ದಾರೆ. ಊರಿನ ಜನರು ನಗರಕ್ಕೆ ಬಾರದೆ ಮಡಿಕೇರಿ ನಗರ ಕೂಡ ಬಿಕೋ ಎನ್ನುತ್ತಿದೆ. ಪ್ರತಿನಿತ್ಯ ಜನಸಂದಣಿಯಿಂದ ಗಿಜಿಗಿಡುತ್ತಿದ್ದ ಮಡಿಕೇರಿ ಮಾರುಕಟ್ಟೆ ಸಂತೆ ದಿನವಾದ ಇಂದು ಬಣಗುಡುತ್ತಿದ್ದ ದೃಶ್ಯ ಎದುರಾಯಿತು. ದೂರದೂರಿನಿಂದ ಬರುವ ವ್ಯಾಪಾರಿಗಳು ಕೆಲವರು ಮಾತ್ರ ಅಂಗಡಿ ಹಾಕಿದ್ದರು, ಪ್ರತಿ ಸಂತೆಗಳಿಗೆ ನಾಡು ತರಕಾರಿಗಳನ್ನು ಹುಡುಕುವ ನಗರವಾಸಿಗಳಿಗೆ ಇಂದು ನಿರಾಶೆ ಕಾದಿತ್ತು. ನಾಡಿನಲ್ಲಿದ್ದವರೆಲ್ಲ ಊರು ಬಿಟ್ಟು ಪಟ್ಟಣ ಸೇರಿದ್ದರಿಂದ ನಾಡು ತರಕಾರಿಗಳ ಸೊಗಡು ಇರಲಿಲ್ಲ. ಅಂಗಡಿ ಹಾಕಿದ್ದ ವ್ಯಾಪಾರಿಗಳು ಕೂಡ ಕೊಂಡುಕೊಳ್ಳಲು ಗ್ರಾಹಕರಿಲ್ಲದೆ ಗಿಟ್ಟಿದಷ್ಟು ವ್ಯಾಪಾರ ಮಾಡಿ ಹಿಂತೆರಳುವಂತಾಯಿತು. ಆಟೋ ರಿಕ್ಷಾಗಳ ನೂಕು- ನುಗ್ಗಲು ಕಂಡುಬರುತ್ತಿದ್ದ ಮಾರುಕಟ್ಟೆ ಮಹದೇವಪೇಟೆ, ಗಣಪತಿ ಬೀದಿ ರಸ್ತೆಗಳು ಖಾಲಿ - ಖಾಲಿಯಂತೆ ಭಾಸವಾಗುತ್ತಿತ್ತು. ಜನಜೀವನವನ್ನೇ ಬುಡಮೇಲು ಮಾಡಿದ ಮಹಾಮಳೆ ಬದುಕಿರುವರ ಹೊಟ್ಟೆಗೂ ತಣ್ಣೀರೆರಡಿದೆಯೆಂದರೆ ತಪ್ಪಾಗಲಾರದು.

- ಸಂತೋಷ್