ಸೋಮವಾರಪೇಟೆ,ಆ.23: ಕೊಡಗಿನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ಸಾಕಷ್ಟು ಪ್ರಮಾಣದಲ್ಲಿ ಕಷ್ಟನಷ್ಟ ಸಂಭವಿಸಿದೆ. ರಕ್ಷಣೆ ಹಾಗೂ ಪರಿಹಾರ ವಿತರಣೆ ಕಾರ್ಯದಲ್ಲಿ ಪೊಲೀಸ್ ಇಲಾಖೆ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಡಿಜಿಐಜಿಪಿ ನೀಲಮಣÉ ಎನ್. ರಾಜು ಹೇಳಿದರು.

ಭಾರೀ ಭೂ ಕುಸಿತಕ್ಕೆ ಒಳಗಾಗಿರುವ ಹಟ್ಟಿಹೊಳೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಮಾಧÀ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾಪತ್ತೆಯಾಗಿರುವವರ ಪತ್ತೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ. ಗರುಡಾ ಫೋರ್ಸ್, ಡ್ರೋಣ್ ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಪರಿಹಾರ ಕೇಂದ್ರಗಳಲ್ಲಿರುವವರ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ. ಕಾಣೆಯಾಗಿದ್ದಾರೆ ಎನ್ನಲಾಗಿರುವವರು ಇಂತಹ ಕೇಂದ್ರದಲ್ಲಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು.ಈಗಾಗಲೇ ಕೊಡಗಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಜನಜೀವನವನ್ನು ಸುಗಮಗೊಳಿಸುವತ್ತಲೂ ಇಲಾಖೆ ಗಮನ ಹರಿಸುತ್ತಿದೆ. ಬೆಳಗಾಂನಿಂದ ಮಹಿಳಾ ಕೆಎಸ್‍ಆರ್‍ಪಿ ತುಕಡಿಯನ್ನು ಕರೆಸಿಕೊಳ್ಳಲಾಗಿದೆ. ಎಲ್ಲಾ ಪರಿಹಾರ ಕೇಂದ್ರಗಳಲ್ಲೂ ಇಲಾಖೆ ವತಿಯಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ನೀಲಮಣಿ ಅವರು ಮಾಹಿತಿಯಿತ್ತರು. ಕೊಡಗಿಗೆ ಹರಿದುಬರುತ್ತಿರುವ ಪರಿಹಾರ ಸಾಮಗ್ರಿಗಳು ಕೆಲವೆಡೆ ದುರುಪಯೋಗವಾಗುತ್ತಿರುವ ಪ್ರಕರಣಗಳ ಬಗ್ಗೆ ಪ್ರಶ್ನಿಸಿದ ಸಂದರ್ಭ ಉತ್ತರಿಸಿದ ನೀಲಮಣಿ ಅವರು, ಪೊಲೀಸ್ ಇಲಾಖೆಯವರು ಕಂದಾಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪರಿಹಾರ ಸಾಮಗ್ರಿಗಳನ್ನು ದೋಚಿರುವ ಪ್ರಕರಣ ಎಲ್ಲೂ ವರದಿಯಾಗಿಲ್ಲ. ಸಂತ್ರಸ್ತರ ಕೇಂದ್ರಗಳಲ್ಲಿ ಉತ್ತಮವಾಗಿ ನಿರ್ವಹಣೆಯಾಗುತ್ತಿದೆ. ಜನರು ಕಷ್ಟಕಾಲಕ್ಕೆ ಮಾನವೀಯತೆ ದೃಷ್ಟಿಯಿಂದ ನೀಡುವ ದೇಣಿಗೆ ಯಾವದೇ ಕಾರಣಕ್ಕೂ ದುರುಪಯೋಗ ಆಗಬಾರದು ಎಂದು ಅಭಿಪ್ರಾಯಿಸಿದರು.

ಕೊಡಗಿನಲ್ಲಿ ಭಾರೀ ಅನಾಹುತ ಸಂಭವಿಸಿದೆ. ಅಲ್ಲಲ್ಲಿ ಬೆಟ್ಟಗುಡ್ಡ ಕುಸಿದಿದ್ದು, ರಸ್ತೆಗಳೇ ಇಲ್ಲವಾಗಿದೆ. ಒಂದೆಡೆಯಿಂದ ಮತ್ತೊಂದೆಡೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ರಸ್ತೆಗಳು ಮುಚ್ಚಲ್ಪಟ್ಟಿರುವ ಸ್ಥಳಗಳಲ್ಲಿ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರಿಗೆ ಸೂಚನೆ ನೀಡಲಾಗುತ್ತಿದೆ. ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು. ಈ ಸಂದರ್ಭ ಐಜಿಪಿ ಶರತ್‍ಚಂದ್ರ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ ಡಿ. ಪನ್ನೇಕರ್, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಣ್ಣ ಅವರುಗಳು ಉಪಸ್ಥಿತರಿದ್ದರು.