ಸೋಮವಾರಪೇಟೆ,ಆ.24: ತಾಲೂಕಿನ ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ವಾತಾವರಣದಲ್ಲಿ ಅತೀ ಶೀತ ಉಂಟಾಗಿ ಜಾನುವಾರುಗಳು ಸತ್ತಿದ್ದು, ಪಶುಪಾಲನಾ ಇಲಾಖೆಯವರ ಕಣ್ಣಿಗೆ ಕಳೇಬರಗಳು ಗೋಚರಿಸುತ್ತಿವೆ.
ತಾಲೂಕಿನ ಕುಂಬಾರಗಡಿಗೆ, ಮುಟ್ಲು, ಕಿರುದಾಲೆ, ಗರ್ವಾಲೆ, ಸೂರ್ಲಬ್ಬಿ ಭಾಗದಲ್ಲಿ ಭಾರೀ ಮಳೆಯಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದು, ಬಹುತೇಕ ಮಂದಿ ಗ್ರಾಮ ತೊರೆದಿದ್ದಾರೆ. ಜನರೇ ಇಲ್ಲದ ಗ್ರಾಮಗಳಲ್ಲಿ ಪಶುಪಾಲನಾ ಇಲಾಖೆಯಿಂದ ರಕ್ಷಣೆ-ಪರಿಹಾರ ತಂಡ ಪರಿಶೀಲನೆ ನಡೆಸುತ್ತಿದ್ದು, ಜಾನುವಾರುಗಳ ಕಳೇಬರಗಳು ಕಂಡುಬರುತ್ತಿವೆ.
ಕುಂಬಾರಗಡಿಗೆ ಗ್ರಾಮದ ಲೋಕೇಶ್ ಈರಪ್ಪ ಅವರಿಗೆ ಸೇರಿದ 13 ಜಾನುವಾರುಗಳು ಕಳೆದ 15 ದಿನಗಳಿಂದ ಕಣ್ಮರೆಯಾಗಿದ್ದುದು, ನಿನ್ನೆ ದಿನ 9 ಜಾನುವಾರುಗಳ ಕಳೇಬರ ಪಶುಪಾಲನಾ ತಂಡಕ್ಕೆ ಗೋಚರಿಸಿದೆ. ಉಳಿದ 4 ಜಾನುವಾರುಗಳು ಇಂದಿಗೂ ಪತ್ತೆಯಾಗಿಲ್ಲ.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಪಶುವೈದ್ಯಾಧಿಕಾರಿ ಡಾ. ಭಾನುಪ್ರಕಾಶ್, ಎನ್.ಟಿ. ವಸಂತ್, ಮಹಮ್ಮದ್ ಸರ್ವರ್ ಪಾಷ, ಚಾಲಕ ದರ್ಶನ್ ಅವರುಗಳ ತಂಡ, ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ತೆರಳಿ ಜಾನುವಾರುಗಳ ಪತ್ತೆಕಾರ್ಯದಲ್ಲಿ ತೊಡಗಿದೆ.
ನಿನ್ನೆ ದಿನ ತಾಕೇರಿ, ಕಿರಗಂದೂರು, ಕುಂಬಾರಗಡಿಗೆ, ಕಿರುದಾಲೆ, ಗರ್ವಾಲೆ, ಸೂರ್ಲಬ್ಬಿ ಭಾಗದಲ್ಲಿ ಕಾಡು ಮೇಡು, ಬೆಟ್ಟಗುಡ್ಡ ಹತ್ತಿಳಿದು ಪತ್ತೆ ಹಚ್ಚುವ ಕಾರ್ಯ ಮಾಡಿದ್ದು, ಕುಂಬಾರಗಡಿಗೆಯಲ್ಲಿ ಮೃತಪಟ್ಟ 9 ಜಾನುವಾರುಗಳು ಗೋಚರಿಸಿವೆ. ಇಂದು ಕಿಬ್ಬೆಟ್ಟ, ಶಾಂತಳ್ಳಿ, ನಗರಳ್ಳಿ, ಕುಮಾರಳ್ಳಿ, ಬಾಚಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಈ ತಂಡ ಕಾರ್ಯಾಚರಿಸಿದೆ.
ಜೀವಂತವಿರುವ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ದುರ್ಗಮ ಹಾದಿಯಲ್ಲಿ ತೆರಳಿ ಜಾನುವಾರುಗಳನ್ನು ಪತ್ತೆ ಹಚ್ಚುವ ಕಾರ್ಯ ಸಾಹಸಮಯವಾಗಿದ್ದು, ವೈದ್ಯರ ತಂಡ ವಾಹನಗಳೇ ಸಂಚರಿಸದ ದಾರಿಯಲ್ಲಿ ನಾಲ್ಕರಿಂದ ಐದು ಕಿ.ಮೀ. ನಡೆದುಕೊಂಡೇ ಕಾರ್ಯಾಚರಣೆ ಮಾಡುತ್ತಿದೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಜಿಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಕೂಡಿಗೆಯಲ್ಲಿ ಇಲಾಖೆ ವತಿಯಿಂದ ಗೋ ಶಾಲೆ ತೆರೆಯಲಾಗಿದ್ದು, ಅಗತ್ಯ ಮೇವು ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಯಾವದೇ ರೀತಿಯ ಜಾನುವಾರುಗಳ ಪಾಲನೆ ಕಷ್ಟಸಾಧ್ಯವಾದರೆ ಮಾಲೀಕರು ಈ ಗೋಶಾಲೆಗೆ ಕರೆತರಬಹುದು. ಇಲಾಖೆಯ ವತಿಯಿಂದ ಅವುಗಳನ್ನು ಪೋಷಿಸಲಾಗುವದು. ಮಾಲೀಕರಿಗೆ ಬೇಕೆಂದಾಗ ಗೋ ಶಾಲೆಯಿಂದ ತಮ್ಮ ಗೋವುಗಳನ್ನು ಸಾಗಿಸಬಹುದು. ಇಲಾಖೆಯ ಈ ಸೌಕರ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.