ಸೋಮವಾರಪೇಟೆ, ಆ. 24: ಸಮೀಪದ ಬಜೆಗುಂಡಿ ಒಂಟಿಯಂಗಡಿಯಿಂದ ಕೆಂಚಮ್ಮನ ಬಾಣೆಗೆ ತೆರಳುವ ಸಂದರ್ಭ ಕೋವರ್‍ಕೊಲ್ಲಿ ಬಳಿ ಜೀಪ್ ಅವಘಡಕ್ಕೀಡಾಗಿ 8 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಸಂಜೆ ಸಂಭವಿಸಿದೆ.

ಕೆಂಚಮ್ಮನಬಾಣೆಗೆ ತೆರಳಲು ರಸ್ತೆ ಬದಿ ಬಸ್‍ಗಾಗಿ ಕಾಯುತ್ತಿದ್ದ ಲಕ್ಷ್ಮೀ, ದೊರೆಸ್ವಾಮಿ, ಕವಿತ ಸೇರಿದಂತೆ 5 ಮಂದಿಯನ್ನು ಅದೇ ಮಾರ್ಗವಾಗಿ ಜೀಪ್‍ನಲ್ಲಿ ತೆರಳುತ್ತಿದ್ದ ಕುಸುಬೂರಿನ ನಂದ ಎಂಬವರು ಜೀಪ್‍ಗೆ ಹತ್ತಿಸಿಕೊಂಡಿದ್ದಾರೆ.

ಕೋವರ್‍ಕೊಲ್ಲಿ ಸಮೀಪದ ತಿರುವಿನಲ್ಲಿ ಜೀಪ್‍ನ ಸ್ಟೇರಿಂಗ್ ತುಂಡಾಗಿ ರಸ್ತೆ ಬದಿಯ ಗುಂಡಿಗೆ ಜೀಪ್ ಮಗುಚಿಕೊಂಡಿದೆ. ಜೀಪ್‍ನಲ್ಲಿದ್ದ ಲಕ್ಷ್ಮೀ ಮತ್ತು ದೊರೆಸ್ವಾಮಿ ಅವರುಗಳಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.