ಸುಂಟಿಕೊಪ್ಪ, ಆ. 24 : ಸುಂಟಿಕೊಪ್ಪ ಪಟ್ಟಣ ಕೋಮು ಸೌಹಾರ್ದತೆ ನೆಲೆಬೀಡು ಎಂಬದಕ್ಕೆ ಇಲ್ಲಿನ ಸಂತ್ರಸ್ತರ ಕೇಂದ್ರಗಳಲ್ಲಿ ಎಲ್ಲಾ ಧರ್ಮ, ಜಾತಿ ಮತ ಬಾಂಧವರು ನೆಲೆಸಿರುವದೇ ಸಾಕ್ಷಿಯಾಗಿದೆ.

ಕೊಡಗಿನಲ್ಲಿ ಎಲ್ಲೇ ಏನೇ ನಡೆದರೂ ಸುಂಟಿಕೊಪ್ಪದ ಜನತೆ ಹಿಂದಿನಿಂದಲೂ ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಎಲ್ಲಾ ಧರ್ಮ, ಜಾತಿ ಬಾಂಧವರು ಇದುವರೆಗೆ ಸೌಹಾರ್ದತೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಕೊಡಗಿನಲ್ಲಿ ಅತಿವೃಷ್ಟಿಯಿಂದ ಮನೆ, ಆಸ್ತಿ ಕಳೆದುಕೊಂಡ ಕಾಂಡನಕೊಲ್ಲಿ, ಬಪ್ಪಕೊಚ್ಚಿ, ಹಾಲೇರಿ, ಕೊಪ್ಪತ್ತೂರು, ತೊಂಡೂರು ಉಪ್ಪುತೋಡುವಿನ ಸಂತ್ರಸ್ತರು ಇದಕ್ಕೆ ದೃಷ್ಟಾಂತ ತಾ. 16 ರಂದು ಬೆಳಗ್ಗಿನ ಜಾವ ಜೀವಭಯದಿಂದ ಸುಂಟಿಕೊಪ್ಪದ ಕೆಲ ಮಾನವೀಯ ಕಳಕಳಿಯ ಸಂಘ ಸಂಸ್ಥೆಯವರು ಯುವ ತಂಡ ಸಂತ್ರಸ್ತರನ್ನು ಸುಂಟಿಕೊಪ್ಪಕ್ಕೆ ಕರೆ ತಂದು ಸಂತ ಅಂತೋಣಿ ಶಾಲೆ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಖತೀಜಉಮ್ಮ ಮದರಸದಲ್ಲಿ ನೆಲೆ ಕಲ್ಪಿಸಿಕೊಟ್ಟು ಅವರಿಗೆ ಮನೆಯಿಂದ ಹಾಗೂ ಕೆಲ ಹೋಟೆಲ್‍ಗಳಿಂದ ಊಟೋಪಚಾರ, ತಂಗಲು ತೊಡಲು ಉಡುಪು, ಬೇಡ್ ಶೀಟ್ ಒದಗಿಸಿದರಲ್ಲದೆ ಯಾವದೇ ಧರ್ಮ ಜಾತಿಗಿಂತ ಮಾನವ ಧರ್ಮ ಶ್ರೇಷ್ಟವಾಗಿದ್ದು, ಸಂತ್ರಸ್ತರು ಮುಖ್ಯ ಎಂಬದನ್ನು ಸಾಧಕಪಡಿಸಿದೆ.

ಸುಂಟಿಕೊಪ್ಪ ಪಂಚಾಯಿತಿ ಆಡಳಿತ ಮಂಡಳಿ, ಸಿಬ್ಬಂದಿಗಳ ಹಾಗೂ ಪೌರ ಕಾರ್ಮಿಕರ ಶ್ರಮವನ್ನು ಕೂಡ ಇಲ್ಲಿನ ಜನತೆ ನೆನಪಿಸುತ್ತಿದ್ದಾರೆ.