ಚೆಟ್ಟಳ್ಳಿ, ಆ. 24: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಭದ್ರಾಳಿ ಅವರು ನಿನ್ನೆ ಕೊಡಗಿನ ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ಇತ್ತು ಪರಿಶೀಲಿಸಿದರು.

ಜಿಲ್ಲಾ ಯುವ ಕಾಂಗ್ರೆಸ್‍ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಅಂಬೇಡ್ಕರ್ ಭವನದ ನಿರಾಶ್ರಿತರ ಕೇಂದ್ರಕ್ಕೆ ಭೇಟಿಮಾಡಿ ಅಲ್ಲಿ ನಿರಾಶ್ರಿತರನ್ನು ಮಾತನಾಡಿಸಿ ಅವರಿಗೆ ಧೈರ್ಯ ತುಂಬಿದರು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಸರಕಾರದ ಮೇಲೆ ಸತತವಾಗಿ ಒತ್ತಡ ಹೇರುವದಾಗಿ ಅವರು ಭರವಸೆ ನೀಡಿದರು. ಮೈತ್ರಿ ಸಭಾಂಗಣದಲ್ಲಿ ಇರುವ ನಿರಾಶ್ರಿತರನ್ನು ಭೇಟಿ ಮಾಡಿ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಲ್ಪಟ್ಟ ಮೈಸೂರಿನ ತಹಶೀಲ್ದಾರರೊಬ್ಬರಿಂದ ಮಾಹಿತಿ ಪಡೆದರು.

ಬಳಿಕ ಎ.ವಿ. ಶಾಲೆ ಕೇಂದ್ರ, ಮಕ್ಕಂದೂರು, ಉದಯಗಿರಿ, ಚಾಮುಂಡೇಶ್ವರಿ ನಗರ, ಮಾದಾಪುರ ವ್ಯಾಪ್ತಿ ಹಾಗೂ ಹಲವು ಕಡೆ ಹಾನಿಗೊಳಗಾದ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಚಾಮುಂಡೇಶ್ವರಿ ನಗರದಲ್ಲಿ ಭೇಟಿ ಇಟ್ಟಾಗ ಅಲ್ಲಿನ ನಿವಾಸಿಯಾದ ಓಡಿಯಂಡ ತಿಮ್ಮಯ್ಯ ಅವರು ಪರಿಸ್ಥಿತಿಯನ್ನು ಕುಲಂಕೂಷವಾಗಿ ವಿವರಿಸಿದರು ನಂತರ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರನ್ನು ಭೇಟಿ ಮಾಡಿ ಕೊಡಗಿನ ಬಗ್ಗೆ ಮಾತುಕತೆ ನಡೆಸಿದರು. ಜೊತೆಯಲ್ಲಿ ತಂದಿದ್ದ ಒಂದು ಲೋಡಿನಷ್ಟು ಆಹಾರ ಸಾಮಗ್ರಿಗಳನ್ನು ಯುವ ಕಾಂಗ್ರೆಸ್ಸಿನ ಅಧ್ಯಕ್ಷರಿಗೆ ಹಸ್ತಾಂತರಿಸಿದರು .

ರಾಜ್ಯ ಅಧ್ಯಕ್ಷರ ಜೊತೆ ಕೊಡಗಿನ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಹನೀಫ್ ಸಂಪಾಜೆ, ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ನಗರ ಅಧ್ಯಕ್ಷ ಸದಾಮುದ್ದಪ್ಪ, ಮಾರ್ಷಲ್, ರವಿ ಮತ್ತು ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರ ಪುತ್ತರಿರ ಪಪ್ಪು ತಿಮ್ಮಯ್ಯ ಹಾಜರಿದ್ದರು.