ಮಡಿಕೇರಿ, ಆ. 24: ಶ್ರೀಮಂಗಲ ಸನಿಹದ ಬೀರುಗ ಗ್ರಾಮದಲ್ಲಿ ಕಾಡಾನೆಗಳ ಉಪಟಳಕ್ಕೆ ವಿವಿಧ ಫಸಲುಗಳು ನಾಶಗೊಳ್ಳುತ್ತಿವೆ. ಮಡಿಕೇರಿ, ಸೋಮವಾರಪೇಟೆ ಭಾಗದಲ್ಲಿ ಮಳೆಯಬ್ಬರಕ್ಕೆ ಜನ ನಲುಗುತ್ತಿದ್ದರೆ, ಇತ್ತ ದಕ್ಷಿಣ ಕೊಡಗಿನಲ್ಲಿ ಕಾಡಾನೆಗಳ ಅಟ್ಟಹಾಸ ಕಂಡು ಬರುತ್ತಿದೆ. ಬೀರುಗ ಗ್ರಾಮದ ಉದಯ ಮತ್ತಿತರ ಗದ್ದೆಯಲ್ಲಿ ನಾಟಿ ಮಾಡಿದ್ದ ಭತ್ತದ ಫಸಲುಗಳನ್ನು ಆನೆಗಳ ಹಿಂಡು ತುಳಿದು ನಾಶಪಡಿಸಿದ್ದರೆ, ಅಡಿಕೆ, ಬಾಳೆ, ತೆಂಗು ಕಾಫಿಯಂತಹ ಫಸಲು ಕೂಡ ಹಾನಿಗೊಂಡಿವೆ. ಕಷ್ಟ ಪಟ್ಟು ಮಾಡಿದ ಕೃಷಿ ಫಸಲು ಆನೆಗಳ ಅಟ್ಟಹಾಸಕ್ಕೆ ಸಿಲುಕುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಆತಂಕಗೊಂಡಿದ್ದಾರೆ.