ಸೋಮವಾರಪೇಟೆ, ಆ. 24: ಕಳೆದ ತಾ. 18ರಿಂದ ಪಟ್ಟಣದಲ್ಲಿ ತೆರೆಯಲ್ಪಟ್ಟ ಗೌಡ ಸಮಾಜ ಮತ್ತು ಕೊಡವ ಸಮಾಜದ ಪರಿಹಾರ ಕೇಂದ್ರಗಳಿಂದ ಹಲವಷ್ಟು ಮಂದಿ ಸಂತ್ರಸ್ತರು ಇಂದು ತಮ್ಮ ಮನೆಗಳತ್ತ ಪಯಣ ಬೆಳೆಸಿದ್ದಾರೆ.

ಕೊಡವ ಸಮಾಜ: ಮಳೆ ಕಡಿಮೆಯಾಗಿರುವ ಹಿನ್ನೆಲೆ ನೂರಾರು ಮಂದಿ ಸಂತ್ರಸ್ತರು ಕೊಡವ ಸಮಾಜದಿಂದ ಮನೆಗಳತ್ತ ಮುಖ ಮಾಡಿದರು. ಸಂತ್ರಸ್ತರಿಗೆಂದು ಕೇಂದ್ರ ತಲುಪಿದ್ದ ವಸ್ತುಗಳನ್ನು ವಿಂಗಡಿಸಿ ಮನೆಗೆ ತೆರಳಿದ ಸಂತ್ರಸ್ತರಿಗೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯುಕುಮಾರ್, ಮನೆಗೆ ತೆರಳುತ್ತಿರುವವರಿಗೆ ಸಾಮಗ್ರಿಗಳನ್ನು ಕೊಟ್ಟು ಕಳುಹಿಸಲಾಗುತ್ತಿದೆ. ಮನೆ ಮಠ ಕಳೆದುಕೊಂಡು ತೀರಾ ನಿರಾಶ್ರಿತ ರಾಗಿರುವವರನ್ನು ಕೇಂದ್ರದಲ್ಲೇ ಉಳಿಸಿಕೊಳ್ಳಲಾಗುತ್ತಿದೆ ಎಂದರು.

ಗೌಡ ಸಮಾಜ: ಗೌಡ ಸಮಾಜದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಿಂದಲೂ ನೂರಾರು ಮಂದಿ ಮನೆಗೆ ತೆರಳಿದ್ದು, ತೀರಾ ನಿರಾಶ್ರಿತರಾಗಿರುವ ಕುಮಾರಳ್ಳಿ ಬಾಚಳ್ಳಿ ಗ್ರಾಮದ 16 ಹಾಗೂ ಐಗೂರಿನ 2 ಕುಟುಂಬಗಳು ಮಾತ್ರ ಕೇಂದ್ರದಲ್ಲಿ ಉಳಿಯಲಿವೆ. ತಾ. 26ರಂದು ಸಮಾಜದಲ್ಲಿ ವಿವಾಹ ಇರುವದರಿಂದ ಈ 16 ಕುಟುಂಬಗಳನ್ನು ಬೇರೆ ಪರಿಹಾರ ಕೇಂದ್ರಗಳಿಗೆ ಕಳುಹಿಸ ಲಾಗುವದು ಎಂದು ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ತಿಳಿಸಿದ್ದಾರೆ.

ಗೌಡ ಸಮಾಜದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರಿಗೆ ದಿನೋಪಯೋಗಿ ವಸ್ತುಗಳನ್ನು ಕೊಟ್ಟು ಕಳುಹಿಸಲಾಗುತ್ತಿದೆ. ಉಳಿಕೆಯಾಗುವ ಮಂದಿಯನ್ನು ಕುಶಾಲನಗರ ಅಥವಾ ಮಡಿಕೇರಿಯ ಸೇವಾ ಭಾರತಿ ಕೇಂದ್ರಗಳಿಗೆ ವಸ್ತುಗಳೊಂದಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ರಾಘವೇಂದ್ರ ಮಾಹಿತಿ ನೀಡಿದ್ದಾರೆ.