ಕುಶಾಲನಗರ, ಆ. 24: ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟು ಪ್ರದೇಶಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಮಹಾ ನಿರೀಕ್ಷಕರಾದ ಶರತ್ಚಂದ್ರ ಮತ್ತಿತರ ಅಧಿಕಾರಿಗಳೊಂದಿಗೆ ಹಾರಂಗಿಗೆ ಭೇಟಿ ನೀಡಿದ ಡಿಜಿಪಿ ಅಣೆಕಟ್ಟೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಹಾರಂಗಿ ಹಿನ್ನೀರಿನ ಭಾಗದಲ್ಲಿ ಭೂಕುಸಿತದಿಂದ ಉಂಟಾದ ಅನಾಹುತಗಳಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ದೇಹಗಳು ಹರಿದು ಬಂದಿರುವ ಬಗ್ಗೆ ಜಲಾಶಯದಲ್ಲಿ ಪತ್ತೆ ಕಾರ್ಯ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ನೀಲಮಣಿ ಎನ್ ರಾಜು, ಕೊಡಗು ಜಿಲ್ಲೆಯಲ್ಲಿ ಅನಾಹುತ ಪ್ರಾರಂಭಗೊಂಡ ತಕ್ಷಣ ರಾಜ್ಯದಿಂದ ಎಲ್ಲಾ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸಮರ್ಪಕವಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.