ಗೋಣಿಕೊಪ್ಪ ವರದಿ, ಆ. 23: ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಯೋಗದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಒಂದು ವಾರಗಳ ಕಾಲ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಇತ್ತೀಚೆಗೆ ಸಮಾರೋಪಗೊಂಡಿತು.

ಸಮಾರೋಪದಲ್ಲಿ ಅರಣ್ಯ ಮಹಾವಿದ್ಯಾಲಯ ನಿವೃತ್ತ ಪ್ರೊ. ಎಂ.ಎನ್. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕೊಡವ ಸಮಾಜ ಅಧ್ಯಕ್ಷ ಕೆ.ಎಂ. ಅರುಣ್, ಟಿ. ಶೆಟ್ಟಿಗೇರಿ ಗ್ರಾ.ಪಂ. ಪಿಡಿಓ ಕವಿತಾ, ಅರಣ್ಯ ಮಹಾ ವಿದ್ಯಾಲಯ ಡೀನ್ ಡಾ. ಸಿ.ಈ. ಕುಶಾಲಪ್ಪ, ಎನ್‍ಎಸ್‍ಎಸ್ ಯೋಜನಾಧಿಕಾರಿ ಮುಕ್ಕಾಟೀರ ಕೆ. ಸುಬ್ರಮಣಿ ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ನಡೆದ ವಿಶೇಷ ಕಾರ್ಯಕ್ರಮಗಳಲ್ಲಿ ಕೃಷಿಕರಿಗೆ ಹಲವು ಕಾರ್ಯಕ್ರಮಗಳು ನಡೆದವು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಅವರು ಕಾಫಿ ಮತ್ತು ಮೆಣಸಿನ ಕೃಷಿಗೆ ಮಳೆಯಿಂದ ಕಾಡುತ್ತಿರುವ ರೋಗಗಳ ನಿಯಂತ್ರಣದ ಬಗ್ಗೆ ಸಲಹೆ ನೀಡಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಪ್ರಾದ್ಯಾಪಕ ಎಂ.ಎನ್. ರಮೇಶ್ ವಿಚಾರ ಸಂಕೀರಣದಲ್ಲಿ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಮಹಾವಿದ್ಯಾಲಯದ ಸಹಪ್ರಾದ್ಯಾಪಕ ಡಾ. ಆರ್.ಎಂ. ಕೆಂಚರೆಡ್ಡಿ, ಜೈವಿಕ ಇಂಧನದ ಮಹತ್ವವನ್ನು ನೀಡಿದರು.

ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ ಕಾರ್ಯಕ್ರಮದಲ್ಲಿ ಗ್ರಾಮದ ಸಾಕುಪ್ರಾಣಿಗೆ ಉಚಿತ ಲಸಿಕೆ ನೀಡಲಾಯಿತು. ವೀರಾಜಪೇಟೆ ದಂತ ಮಹಾವಿದ್ಯಾಲಯ ತಂಡದಿಂದ ದಂತ ತಪಾಸಣೆ, ಯುವ ವಿಜ್ಞಾನಿ ಡಾ. ಕಾವೇರಮ್ಮ ದೇವಯ್ಯ ಇವರಿಂದ ಆರ್ಕೀಡ್ ಬಗ್ಗೆ ಮಾಹಿತಿ, ಪ್ರದರ್ಶನ ನಡೆಯಿತು.

ಕ್ರೀಡೆಯ ಪಾತ್ರ, ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ, ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ, ಕೃಷಿ ಅರಣ್ಯ ಮತ್ತು ಮರದ ಅಳತೆಯ ಬಗ್ಗೆ ಮಾಹಿತಿ ನಡೆಯಿತು.