ಮಡಿಕೇರಿ, ಆ. 23: ಪ್ರಾಕೃತಿಕ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಆಸ್ತಿ-ಪಾಸ್ತಿ ಹಾನಿಯೊಂದಿಗೆ ರಸ್ತೆಗಳು ಕೂಡ ಹಾನಿಗೀಡಾಗಿದ್ದು, ತಕ್ಷಣಕ್ಕೆ ಸಂಪರ್ಕ ಕಡಿದುಕೊಂಡಿರುವ ರಸ್ತೆಗಳ ದುರಸ್ತಿಗೆ ಪ್ರಥಮ ಆದ್ಯತೆ ನೀಡ ಲಾಗುವದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣಬೈರೇಗೌಡ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿಂದು ಪತ್ರಿಕಾ ಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಸಚಿವರು ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದು, 4,500 ಕಿ.ಮೀ. ಗ್ರಾಮೀಣ ರಸ್ತೆಗಳ ಪೈಕಿ, ಶೇ. 10ರಷ್ಟು ಅಂದರೆ 250 ಕಿ.ಮೀ. ರಸ್ತೆ ದುರಸ್ತಿಪಡಿಸಲಾಗದಷ್ಟು ಸಂಪೂರ್ಣ ಹಾನಿಗೊಳಗಾಗಿದೆ. ಶೇ. 50, ಅಂದರೆ 2 ಸಾವಿರ ಕಿ.ಮೀ.ನಷ್ಟು ರಸ್ತೆ ಹಾನಿಗೀಡಾಗಿದೆ. ಈಗಾಗಲೇ ಬಿಡುಗಡೆಗೊಂಡಿರುವ ರೂ. 11.50 ಕೋಟಿ ಹಾಗೂ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರೂ. 12 ಕೋಟಿ ಹಣ ಬಳಸಿಕೊಂಡು ದುರಸ್ತಿಪಡಿಸಲಾಗುವದು. ತುರ್ತಾಗಿ ಸಂಪರ್ಕ ಕಡಿತಗೊಂಡಿರುವ ತಕ್ಷಣಕ್ಕೆ ಸರಿಪಡಿಸಬಹುದಾದ ರಸ್ತೆಗಳನ್ನು ಸರಿಪಡಿಸಲಾಗುವದು. ಸಂಪೂರ್ಣ ಹಾನಿಯಾಗಿರುವ, ದೀರ್ಘಾವಧಿ ಕಾಮಗಾರಿಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದೆಂದು ತಿಳಿಸಿದರು.

ಮಕ್ಕಂದೂರು, ಮುಕ್ಕೋಡ್ಲು, ದೇವಸ್ತೂರು, ಗಾಳಿಬೀಡು ಮುಂದಾದೆಡೆ ಭಾರೀ ಪ್ರಮಾಣದಲ್ಲಿ ಭೂ ಕುಸಿತದೊಂದಿಗೆ ಪ್ರಾಣಹಾನಿ, ಆಸ್ತಿ, ರಸ್ತೆಗಳಿಗೆ ಹಾನಿಯಾಗಿದೆ.

ಶತಮಾನದಲ್ಲಿ ಒಂದು ಬಾರಿ ಈ ರೀತಿಯ ಪ್ರಕೃತಿಯ ನಿಯಮ ವಾದರೂ, ಪ್ರಕೃತಿ

(ಮೊದಲ ಪುಟದಿಂದ) ವಿಕೋಪ ದುಃಖ ತರುತ್ತದೆ. ಜಿಲ್ಲೆಯಲ್ಲಿ ಸಾಕಷ್ಟು ನಷ್ಟ ಸಂಭವಿಸುತ್ತಿದೆ. ಜಿಲ್ಲೆಯ ನೆರವಿಗೆ ಸರಕಾರ ಭದ್ರವಾಗಿ ನಿಂತಿದೆ. ಇಲಾಖೆ ವತಿಯಿಂದಲು ಪರಿಹಾರ ಕ್ರಮ ತ್ವರಿತವಾಗಿ ಆಗಲಿದ್ದು, ಇಲ್ಲಿ ಸಿಬ್ಬಂದಿ ಕೊರತೆಗಳಿರುವದರಿಂದ ಮಂಗಳೂರು ಹಾಗೂ ಮೈಸೂರಿನಿಂದ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಪರಿಹಾರ ಕ್ರಮ ಹಂತಕ್ಕೆ ಬರುವವರೆಗೆ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಜಿಲ್ಲೆಗೆ ಹಿರಿಯ ವಿಶೇಷಾಧಿಕಾರಿಗಳನ್ನು ಕೂಡ ನಿಯೋಜಿಸಲಾಗಿದೆ ಎಂದರು.

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ಕೆಲವೆಡೆ ರಸ್ತೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ಬೇರೆಯೇ ಮಾರ್ಗ ರೂಪಿಸಬೇಕಿದೆ, ತಾಂತ್ರಿಕ ಪರಿಣಿತರನ್ನು ಕರೆಸಿ ಪರಿಶೀಲಿಸಿ ಮಾಡಬೇಕಿದೆ. ಇದೀಗ ಪರ್ಯಾಯ ಕೇಂದ್ರದಲ್ಲಿರುವವರು ಮನೆಗೆ ತೆರಳಲು ಬಯಸುತ್ತಿದ್ದು, ಆ ವಿಭಾಗಕ್ಕೆ ಕನಿಷ್ಟ ವಾಹನ ಸಂಚರಿಸಲು ಅನುಗುಣವಾಗುವಂತೆ ದುರಸ್ತಿ ಕಾರ್ಯ ನೆರವೇರಿಸಲಾಗುವದು. ನೊಂದವರಿಗೆ ಮತ್ತಷ್ಟು ನೋವು ಕೊಡಬಾರದು, ಅವರ ನೋವಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅತಿಖ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ವಿಶೇಷಾಧಿಕಾರಿ ಚಾರುಲತಾ ಸೋಮಲ್ ಇದ್ದರು.