ಮಡಿಕೇರಿ, ಆ. 23: ಕೊಡಗಿನಲ್ಲಿ ಮಳೆಯಿಂದಾಗಿರುವ ಅನಾಹುತಗಳಿಗೆ ಸಂಬಂಧಿಸಿದಂತೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಡಗಿಗೆ ಖುದ್ದು ಭೇಟಿ ನೀಡಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ವ್ಯಾಲಿವ್ಯೂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ಉಂಟಾದ ಮಳೆ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರ ಘೋಷಿಸಿದ ರೀತಿಯಲ್ಲೇ ಪ್ರಧಾನಿಯವರು ಕೊಡಗಿಗೂ ಭೇಟಿ (ಮೊದಲ ಪುಟದಿಂದ) ನೀಡಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಕೊಡಗಿನ ವಿವಿಧೆಡೆಗೆ ತಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿರಾಶ್ರಿತರಿಗೆ ಶಾಶ್ವತ ಸೂರು, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆಯಿತ್ತರು. ಕಾಂಗ್ರೆಸ್‍ನಿಂದ ರಾಜ್ಯಸಭಾ ಸದಸ್ಯ ಶಾಮಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ಕೊಡಗಿನಲ್ಲಿ ನಷ್ಟದ ಕುರಿತು ನೀಡುವ ವರದಿಯನ್ವಯ ಪಕ್ಷದಿಂದ ಸಾಧ್ಯವಾದಷ್ಟು ನೆರವನ್ನು ಕೊಡಗಿಗಾಗಿ ನೀಡಲಾಗುವದು. ಕಾಂಗ್ರೆಸ್‍ನ ಶಾಸಕರು, ಸಂಸದರು ಕೊಡಗಿಗಾಗಿ ತಮ್ಮ ಒಂದು ತಿಂಗಳ ವೇತನವನ್ನು ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಮಾಹಿತಿಯಿತ್ತರು. 50 ಮಂದಿ ವೈದ್ಯರನ್ನು ಕೊಡಗಿನಲ್ಲಿ ನಿರಾಶ್ರಿತರ ಸೇವೆಗಾಗಿ ಕಳುಹಿಸಲಾಗಿದೆ. ಮುಂದೆಯೂ ಕೂಡ ಕಾಂಗ್ರೆಸ್ ಸರ್ಕಾರ ಕೊಡಗಿಗೆ ಸಹಾಯ ಮಾಡಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಕೊಡಗಿಗೆ ಅಗತ್ಯವಾದ ನೆರವನ್ನು ಕಲ್ಪಿಸಲು ಪಕ್ಷ ಬದ್ಧವಾಗಿದೆ ಎಂದು ಹೇಳಿದರು. ಈ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಮಾಜಿ ಸಚಿವ ಸಿ.ಹೆಚ್. ವಿಜಯಶಂಕರ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್‍ನ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.