ಮಡಿಕೇರಿ, ಆ. 23: ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಅನಾಹುತ ಹಿನ್ನೆಲೆಯಲ್ಲಿ ಸಂತ್ರಸ್ತರಿಗಾಗಿ ಶಿಕ್ಷಕರು ಒಂದು ದಿನದ ವೇತನವನ್ನು ನೀಡಲು ಒಪ್ಪಿದ್ದಾರೆ. ತಾನು ಕೂಡ ತನ್ನ ಒಂದು ತಿಂಗಳ ವೇತನವನ್ನು ಕೊಡಗಿಗಾಗಿ ನೀಡುತ್ತೇನೆ ಎಂದು ರಾಜ್ಯ ಶಿಕ್ಷಣ ಸಚಿವ ಎನ್. ಮಹೇಶ್ ತಿಳಿಸಿದ್ದಾರೆ.
ನಗರದ ಹೊಟೇಲ್ ವ್ಯಾಲಿವ್ಯೂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗಿನಲ್ಲಿ ನೂರಾರು ಶಾಲೆಗಳು ದುಸ್ಥಿತಿಯಲ್ಲಿದ್ದು, ಇವುಗಳ ದುರಸ್ತಿಗೆ ಸುಮಾರು 4 ಕೋಟಿ ರೂ. ವೆಚ್ಚ ತಗಲುವದಾಗಿ ಅಂದಾಜಿಸಲಾಗಿದೆ. ಇದಕ್ಕಾಗಿ ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿರುವ ಅನುದಾನವನ್ನು ಬಳಸಿಕೊಳ್ಳಲಾಗುವದು. ಶಿಕ್ಷಕರ ಒಂದು ದಿನದ ವೇತನದಿಂದ ಸುಮಾರು 38 ಕೋಟಿ ಹಣ ಸಂಗ್ರಹವಾಗಲಿದ್ದು, ಇದರಿಂದ 4 ಕೋಟಿಯನ್ನು ಇಲಾಖೆಗೆ ನೀಡಿ, ಉಳಿದುದ್ದನ್ನು ಸಂತ್ರಸ್ತರಿಗೆ ನೀಡಲು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗುವದು ಎಂದು ಸಚಿವರು ತಿಳಿಸಿದರು.
ತಾನು ಕೊಡಗಿನ ಹಲವು ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ್ದು, ಅಲ್ಲಿನ ನಿರಾಶ್ರಿತರು ಶಾಶ್ವತ ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸರಕಾರ ಬದ್ಧವಾಗಿದ್ದು, ಈ ಬಗ್ಗೆ ನಿರಾಶ್ರಿತರಿಗೆ
(ಮೊದಲ ಪುಟದಿಂದ) ಯಾವದೇ ಚಿಂತೆ ಬೇಡ ಎಂದರು. ಉದ್ಯೋಗ ಕಲ್ಪಿಸುವಂತೆ ನಿರಾಶ್ರಿತರು ಮನವಿ ಮಾಡಿದ್ದಾರೆ. ಈ ಬಗ್ಗೆ ಜಿ.ಪಂ. ಸಿಇಓ ಅವರೊಂದಿಗೆ ತಾನು ಮಾತನಾಡಿದ್ದು, ಉದ್ಯೋಗ ಖಾತ್ರಿಯೋಜನೆಯಡಿ ನಿರಾಶ್ರಿತರಿಗೆ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದ್ದೇನೆ. ಸಿಇಓ ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಮಹೇಶ್ ಹೇಳಿದರು. ಸ್ತ್ರೀಶಕ್ತಿ ಸಂಘಗಳ ಸಾಲಮರು ಪಾವತಿಗೆ ಕೊಂಚ ಕಾಲವಕಾಶ ಕಲ್ಪಿಸುವಂತೆ ಯೂ ನಿರಾಶ್ರಿತರು ತನಗೆ ಮನವಿ ಮಾಡಿದ್ದು, ಈ ಬಗ್ಗೆ ತಾನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಿರಾಶ್ರಿತರಿಗೆ ಉದ್ಯೋಗ ದೊರೆತು ಆದಾಯ ಬರುವ ತನಕ ಯಾವದೇ ಹಣಕಾಸು ಸಂಸ್ಥೆಗಳು ನಿರಾಶ್ರಿತರಿಗೆ ತೊಂದರೆ ಕೊಡದಂತೆ ನಿರ್ದೇಶನ ನೀಡಲು ಸೂಚಿಸಿದ್ದೇನೆ ಎಂದರು.
ಪ್ರಸ್ತುತ ಮಳೆಯಿಂದ ಸಮಸ್ಯೆ ಇಲ್ಲದ ಪ್ರದೇಶಗಳ ಶಾಲೆಗಳನ್ನು ಪುನರಾರಂಭ ಮಾಡಲಾಗಿದೆ. ಸಮಸ್ಯೆ ಇರುವ ಪ್ರದೇಶಗಳ ಶಾಲೆಗಳಿಗೆ ರಜೆ ನೀಡಲಾಗಿದ್ದು, ಅಲ್ಲಿನ ಮಕ್ಕಳನ್ನು ಸುರಕ್ಷಿತ ಶಾಲೆಗಳಿಗೆ ದಾಖಲು ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲಿಗೂ ಬರಲು ಸಾಧ್ಯವಾಗದ ಮಕ್ಕಳಿದ್ದರೆ ಅವರಿಗೆ ಪರಿಹಾರ ಕೇಂದ್ರಗಳಲ್ಲಿಯೆ ಶಿಕ್ಷಕರನ್ನು ನಿಯೋಜಿಸಿ ಕಲಿಕೆಗೆ ಅವಕಾಶ ಮಾಡಿಕೊಡಲಾಗುವದು. ಕೊಡಗಿನಲ್ಲಿ 107 ಶಾಲೆಗಳು ಹಾನಿಗೊಳಗಾಗಿದ್ದು, 76 ಶಾಲೆಗಳು ರಿಪೇರಿ ಆಗಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು. ಕೊಡಗಿನಲ್ಲಿ 1573 ಶಿಕ್ಷಕರ ಹುದ್ದೆಗಳಿದ್ದು, 1371 ಭರ್ತಿಯಾಗಿದೆ. 202 ಹುದ್ದೆಗಳು ಖಾಲಿ ಇವೆ ಎಂದರಲ್ಲದೆ, ಮಳೆ ಹಿನ್ನೆಲೆ ಮಕ್ಕಳಿಗೆ ಹಲವು ದಿನ ರಜೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಠ ಪ್ರವಚನಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಶನಿವಾರ ಹಾಗೂ ಭಾನುವಾರ ವಿಶೇಷ ತರಗತಿಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.