ಸೋಮವಾರಪೇಟೆ, ಆ.23: ಕಳೆದ 7 ದಿನಗಳ ಹಿಂದೆ ಭೂಸಮಾಧಿ ಯಾಗಿರುವ ಮನೆ ಯೊಳಗೆ ಸಿಲುಕಿರುವ ಮೂವತ್ತೊಕ್ಲುವಿನ ಮುಕ್ಕಾಟಿರ ಉತ್ತಪ್ಪ (ಸಾಬು) ಅವರ ಸಣ್ಣ ಸುಳಿವೂ ಸಹ ಲಭ್ಯವಾಗಿಲ್ಲ.ಕಳೆದ ತಾ. 16ರಂದು ಸಂಜೆ 4.30ರ ಸುಮಾರಿಗೆ ಸಂಭವಿಸಿದ ಭಾರೀ ಭೂ ಕುಸಿತಕ್ಕೆ ಉತ್ತಪ್ಪ ಅವರ ಮನೆ ಸಂಪೂರ್ಣ ಮುಚ್ಚಿಹೋಗಿದ್ದು, ಮನೆಯಿದ್ದ ಸ್ಥಳದಲ್ಲೀಗ ಭಾರೀ ಗಾತ್ರದ ಬಂಡೆ, ಕೆಸರಿದೆ. ಆ ಪ್ರದೇಶದಲ್ಲಿ ಮನೆ ಎಂಬುದು ಇತ್ತು ಎಂಬ ಊಹೆಯೂ ಆಗದಷ್ಟರ ಮಟ್ಟಿಗೆ ಸ್ಥಳ ಬದಲಾವಣೆಯಾಗಿದ್ದು, ಮಣ್ಣಿನೊಳಗೆ ಉತ್ತಪ್ಪ ಸಿಲುಕಿದ್ದಾರೆ ಎಂಬ ಸಂಶಯದಿಂದ ಶೋಧ ಕಾರ್ಯ ಆರಂಭವಾಗಿದೆ.

ತಾ. 16ರಿಂದಲೂ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆ ಮೊನ್ನೆ ದಿನ ಜೆಸಿಬಿ ಯಂತ್ರ ಆಗಮಿಸಿ ಕೆಲಸ ಮಾಡದೇ ಹಿಂತೆರಳಿದೆ. ಇಂದೂ ಸಹ ಮಡಿಕೇರಿಯಿಂದ ಆಗಮಿಸಿದ್ದ ಜೆಸಿಬಿ ಯಂತ್ರ ಯಾವದೇ ಕಾರ್ಯಾಚರಣೆ ನಡೆಸದೇ ಹಿಂತೆರಳಿದೆ. ಈ ಕೆಸರಿನಲ್ಲಿ ಜೆಸಿಬಿ ಕೆಲಸ ಮಾಡಲು ಆಗಲ್ಲ; ಹಿಟಾಚಿ ಯಂತ್ರ ಬೇಕು ಎಂದು ಚಾಲಕ ತಿಳಿಸಿ ಸ್ಥಳದಿಂದ ಹಿಂತೆರಳಿದ್ದಾನೆ.ಮುಕ್ಕಾಟಿರ ಉತ್ತಪ್ಪ ಅವರು ಮಣ್ಣಿನೊಳಗೆ ಸಿಲುಕಿರಬಹುದಾದ ಸಂಶಯದಿಂದ ಮಡಿಕೇರಿಯಿಂದ ಶ್ವಾನ ದಳ ಆಗಮಿಸಿ ಕಾರ್ಯಾಚರಣೆ ನಡೆಸಿದರೂ ಯಾವದೇ ಸಣ್ಣ ಕುರುಹೂ ಸಹ ಲಭ್ಯವಾಗಿಲ್ಲ.

ಉತ್ತಪ್ಪ ಅವರ ಮನೆಯಿದ್ದ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿರುವದರಿಂದ ಸಾವಿರಾರು ಲೋಡ್ ಮಣ್ಣು ಸುಮಾರು ಎರಡು ಏಕರೆಯಷ್ಟು ಪ್ರದೇಶದಲ್ಲಿ ನಿಂತಿದೆ. ಎಲ್ಲಿ ಮನೆಯಿತ್ತು?

(ಮೊದಲ ಪುಟದಿಂದ) ಎಂಬ ಬಗ್ಗೆಯೇ ಸ್ಥಳೀಯರೇ ಸಂಶಯಪಡುವಷ್ಟರ ಮಟ್ಟಿಗೆ ಆ ಪ್ರದೇಶ ಬದಲಾಗಿದೆ. ಸ್ಥಳಕ್ಕೆ ಭಾರತೀಯ ಸೇನೆಯ ಸೈನಿಕರೂ ಆಗಮಿಸಿದ್ದು, ಕಾಲಿಟ್ಟರೆ ಮಂಡಿಯವರೆಗೂ ಹೂತುಕೊಳ್ಳುವ ಕೆಸರಿನ ನಡುವೆ ಸ್ಥಳೀಯರ ಸಹಕಾರದಿಂದ ಶೋಧ ಕಾರ್ಯ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಉತ್ತಪ್ಪ ಅವರ ಮನೆಯೊಳಗಿದ್ದ ಸಣ್ಣಪೆಟ್ಟಿಗೆ ಗೋಚರವಾಗಿದ್ದು, ಅದರೊಳಗಿದ್ದ ಸಣ್ಣಪುಟ್ಟ ವಸ್ತುಗಳು ಲಭಿಸಿವೆ. ಯಾವ ಭಾಗದಲ್ಲಿ ಮನೆಯ ಅವಶೇಷಗಳಿವೆ ಎಂಬ ಕಲ್ಪನೆಯೂ ಇಲ್ಲದಂತಾಗಿದೆ. ಶೋಧ ಕಾರ್ಯದಿಂದ ಯಾವದೇ ಪ್ರಯೋಜನವಿಲ್ಲ ಎಂದು ಸ್ಥಳೀಯ ಕೆಲವರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಆದರೂ ಕಾರ್ಯಾಚರಣೆ ಮುಂದುವರೆಸಲು ನಿರ್ಧರಿಸಲಾಗಿದೆ.