ಮಡಿಕೇರಿ, ಆ. 23: ಕಳಕೇರಿ ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಹೆಬ್ಬೆಟ್ಟಗೇರಿಯಲ್ಲಿ ಭೂಕುಸಿತದಿಂದ ಮಣ್ಣಿನೊಳಗೆ ಹುದುಗಿ ಹೋಗಿದ್ದ ಮಿನ್ನಂಡ ಉಮ್ಮವ್ವ ಬಿದ್ದಪ್ಪ (76) ಎಂಬವರ ಶವವನ್ನು ಇಂದು ಪತ್ತೆ ಹಚ್ಚಿ ಹೊರತೆಗೆಯಲಾಯಿತು. ತಾ. 17 ರಂದು ಬೆಳಿಗ್ಗೆ ಭೂಕುಸಿದು ಮನೆಯೂ ನೆಲ ಸಮಗೊಂಡ ವೇಳೆ ಉಮ್ಮವ್ವ, ಮನೆಮಂದಿಯ ಕಣ್ಣೆದುರೇ ಭೂ ಸಮಾಧಿಯಾಗಿದ್ದರು.ಮೃತರ ಪುತ್ರ ಗಣಪತಿ ನೀಡಿದ ದೂರಿನ ಮೇರೆಗೆ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ತಂಡದೊಂದಿಗೆ ಭಾರತೀಯ ಸೇನೆ, ಪೊಲೀಸ್ ಮೀಸಲು ಪಡೆ ಹಾಗೂ ಕೊಡಗು ಪೊಲೀಸರು ಸತತ ಶೋಧ ನಡೆಸಿದ್ದರು. ದುರ್ಘಟನೆಯ ಸ್ಥಳಕ್ಕೆ ಜೆಸಿಬಿ ಇತ್ಯಾದಿ ಕೊಂಡೊಯ್ಯಲಾಗದೆ, ಸ್ಥಳೀಯರ ಸಹಕಾರರೊಂದಿಗೆ ಸೇನಾ ಸಿಬ್ಬಂದಿ, ಪೊಲೀಸರು ಮಣ್ಣು ಅಗೆದು ಮೃತದೇಹ ಪತ್ತೆ ಹಚ್ಚುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ತಾ. 17 ರಂದು ಬೆಳಿಗ್ಗೆ ಗಣಪತಿ ಅವರ ಮನೆಗೆ ಬೆಟ್ಟ ಕುಸಿದು ಮಣ್ಣು ಅಪ್ಪಳಿಸಿದ ರಭಸಕ್ಕೆ ತಾಯಿ ಉಮ್ಮವ್ವ ಸಹಿತ ಮನೆಯೂ ಮಣ್ಣು ಪಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾರ್ಯಾಚರಣೆಯಲ್ಲಿ ವ್ಯಾಪಕ ಶೋಧದೊಂದಿಗೆ ಮಣ್ಣು ಸರಿಸುತ್ತಾ ಹುಡುಕಾಟ ಮುಂದುವರೆಸಿದಾಗ ಗ್ರಾಮಸ್ಥ ರಘು ಎಂಬವರು ಮಣ್ಣಿನಡಿ ಹುದುಗಿದ್ದ ಶವದ ಸುಳಿವು ನೀಡಿದರು.
ಆ ಬಳಿಕ ಮೃತದೇಹವನ್ನು ಹೊರ ತೆಗೆಸಿ ಕುಟುಂಬ ಸದಸ್ಯರು ಹಾಗೂ ಬಂಧುಗಳ ಸಮ್ಮುಖ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ದುರ್ದೈವಿ ಉಮ್ಮವ್ವ ನಾಲ್ವರು ಪುತ್ರರೊಂದಿಗೆ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಇಂದಿನ ಕಾರ್ಯಾಚರಣೆ ವೇಳೆ ಪೊಲೀಸ್ ತಂಡದ ನಿರೀಕ್ಷಕ ಭರತ್, ವೃತ್ತ ನಿರೀಕ್ಷಕ ಪ್ರದೀಪ್, ಠಾಣಾಧಿಕಾರಿ ಚೇತನ್ ಮತ್ತು ಸಿಬ್ಬಂದಿ, ಮಿಲಿಟರಿ ಸೇರಿದಂತೆ ಇತರರು ಪಾಲ್ಗೊಂಡಿದ್ದು, ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ, ಉಪಾಧ್ಯಕ್ಷೆ ಜಾಜಿ ಸತೀಶ್, ಸದಸ್ಯ ಕೊಕ್ಕಲೇರ ಅಯ್ಯಪ್ಪ ಸಹಿತ ಗ್ರಾಮಸ್ಥರು, ಮೃತರ ಸಂಬಂಧಿಕರು ಹಾಜರಿದ್ದರು.