ಮಡಿಕೇರಿ, ಆ. 22: ಕಳೆದ 7 ದಿನಗಳ ಹಿಂದೆ ವಾಯು- ವರುಣರ ರೌದ್ರಾವತಾರಕ್ಕೆ ಬಲಿಯಾದ ಮೂವರ ಶವಗಳು ಇಂದು ಭೂಮಿಯಡಿ ಪತ್ತೆಯಾಗಿವೆ. ಆಗಸ್ಟ್ ತಿಂಗಳಿನಲ್ಲಿ ಮಹಾಮಳೆ, ಭೂಕುಸಿತ, ಪ್ರವಾಹಕ್ಕೆ ಇದೀಗ ಗತಪ್ರಾಣರಾದವರ ಸಂಖ್ಯೆ 9ಕ್ಕೆ ಏರಿದೆ. ಜಿಲ್ಲಾಧಿಕಾರಿಗಳ ಹೇಳಿಕೆಯಂತೆ ಸಾವಿನ ಸಂಖ್ಯೆ 9 ಹಾಗೂ ಕಾಣೆಯಾದವರ ಸಂಖ್ಯೆ 6 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ರಾಜ್ಯಮಟ್ಟದ ವರದಿಗಳಲ್ಲಿ ಸಾವಿನ ಸಂಖ್ಯೆ ಒಟ್ಟು 15 ಎಂದು ಪ್ರಕಟಿಸಲಾಗುತ್ತಿದೆ. ತಾ. 16 ರಂದು ರಾತ್ರಿ ಕೊಡಗಿನ ಜನತೆಗೆ ಮಳೆ ಯಮಪಾಶವಾಗಿ ಬಂದೆರಗಿತು. ಕಾಟಕೇರಿಯಲ್ಲಿ ಮಹಾಮಳೆ, ಭೂ ಕುಸಿತದಲ್ಲಿ ಮೂರು ಮಂದಿ ಭೂಗತರಾಗಿದ್ದರು. ಆದರೆ, ಘಟನೆಯ ಮರುದಿನ ಎರಡು ಶವಗಳು ಮಾತ್ರ ದೊರಕಿದ್ದು ಪವನ್ (37) ಎಂಬ ವ್ಯಕ್ತಿಯ ಶವವನ್ನು ಎನ್.ಡಿ.ಆರ್ ಎಫ್. ತಂಡ ಇಂದು ಹರ ಸಾಹಸದಿಂದ ಪತ್ತೆ ಹಚ್ಚಿತು. ಅದೇ ರೀತಿ ಮಕ್ಕಂದೂರು ಗ್ರಾಮದ ಮೇಘತ್ತಾಳುವಿನಲ್ಲಿ ಮನೆ ಸಹಿತ ಕೊಚ್ಚಿಕೊಂಡು ಹೋಗಿ ಅಸು ನೀಗಿದ್ದು ಪತ್ತೆಯಾಗದಿದ್ದ ತಾಯಿ ಚಂದ್ರಾವತಿ (61) ಹಾಗೂ ಮಗ ಉಮೇಶ್ ರೈ (36) ಈ ಇಬ್ಬರ ಶವಗಳನ್ನು ಭಾರತೀಯ ಸೇನಾ ತಂಡ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿ ಮೇಲಕ್ಕೆ ತೆಗೆಯಲಾಯಿತು.
ತಾ. 16 ರ ರಾತ್ರಿ ಜಿಲ್ಲೆಗೆ ಅತಿ ಭೀಕರ, ಮಾರಕ ಸನ್ನಿವೇಶ ಬಂದೆರಗಿತು. ಅಂದು ರಾತ್ರಿ ಕಾಟಕೇರಿಯಲ್ಲಿ ಭಾರೀ ಸದ್ದು ಕೇಳಿತು. ಗ್ರಾಮಸ್ಥರು ಭಯ ಭೀತರಾದರು. ಪ್ರಸಾದ್ ಎಂಬವರ ಮನೆ ಕುಸಿದಾಗ ಅವರ ಮನೆಯವರು ಹೇಗೋ ಹೊರ ಬಂದು ಪ್ರಾಣಾಪಾಯದಿಂದ ಪಾರಾದರು. ಮತ್ತೊಂದು ಮನೆಯೂ ಕುಸಿದು ಬಿದ್ದಿತು. ಮೇಲ್ಭಾಗದ ಪ್ರದೇಶದಲ್ಲಿದ್ದ ಈ ಮನೆಗಳು ಕುಸಿಯುತ್ತಿದ್ದಂತೆ ಕೆಳ ಭಾಗದಲ್ಲಿ ನೆಲೆಸಿದ್ದ ಕೃಷಿಕ ವೆಂಕಟರಮಣ, ತೋಟ ಕಾರ್ಮಿಕರಾದ ಪವನ್ ಹಾಗೂ ಕೆಎಸ್ಆರ್ಪಿ ಪೊಲೀಸ್ ಯಶವಂತ್- ಈ ಮೂವರು ಭಾರೀ ಶಬ್ದ ಎಲ್ಲಿಂದ ಬಂತು ಎಂದು ಮಹಾ ಮಳೆಯ ನಡುವೆಯೇ ಮನೆಗಳಿಂದ ಹೊರಬಂದು ಮೇಲ್ಭಾಗದತ್ತ ಸಾಗುತ್ತಿದ್ದಂತೆ ಭಾರೀ ಭೂಕುಸಿತ, ಜಲಪ್ರವಾಹ ಈ ಮೂವರನ್ನೂ ಕೊಚ್ಚಿಕೊಂಡು ಭೂಗತಗೊಳಿಸಿತು.
ಯಶವಂತ್ ಅವರು ಅವಿವಾಹಿತರಾಗಿದ್ದು, ತಾಯಿಯನ್ನು ಒಂಟಿಯಾಗಿ ಅಗಲಿದ್ದಾರೆ. ವೆಂಕಟರಮಣ ಅವರು ಪತ್ನಿ ವೀಣಾ ಕುಮಾರಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇದೀಗ ಇಂದು ಶವ ಪತ್ತೆಯಾಗಿರುವ ಪವನ್ ತನ್ನ ಪತ್ನಿ ಉಮಾವತಿ ಹಾಗೂ 5 ವರ್ಷದ ಮಗಳು ಧನ್ಯಶ್ರೀಯನ್ನು ಅಗಲಿದ್ದಾರೆ. ತಾನೂ ಕೂಡ ಕಾರ್ಮಿಕಳಾಗಿ ಪತಿಯೊಂದಿಗೆ ದುಡಿಯುತ್ತಿದ್ದು ಇದೀಗ ಕಿರು ವಯಸ್ಸಿನ ಮಗಳನ್ನು ತನಗೊಪ್ಪಿಸಿ ಪತಿ ಬಿಟ್ಟು ಅಗಲಿದ್ದಾರೆ. ಮುಂದಿನ ದಾರಿ ಕಾಣದಾಗಿದೆ ಎಂದು ಸ್ಥಳಕ್ಕೆ ತೆರಳಿದ್ದ “ಶಕ್ತಿ” ಯೊಂದಿಗೆ ಉಮಾವತಿ ದು:ಖ ಪೂರಿತರಾಗಿ ನುಡಿದರು. ಈ ಸಂದರ್ಭ ಮೃತ ವೆಂಕಟರಮಣ ಅವರ ಪತ್ನಿ ವೀಣಾ ಕುಮಾರಿ ಮತ್ತು ಮಕ್ಕಳೂ ಸ್ಥಳದಲ್ಲಿದ್ದು ತಮ್ಮ ದು:ಖ ತೋಡಿ ಕೊಂಡರು. ಅಲ್ಲದೆ, ಅವಿವಾಹಿತ ಪುತ್ರ ಯಶವಂತ್Àನನ್ನು ಕಳೆದುಕೊಂಡ ವೃದ್ಧೆ ತಾಯಿಯೂ
(ಮೊದಲ ಪುಟದಿಂದ) ತಾನು ಏಕಾಂಗಿಯಾಗಿ ಬಿಟ್ಟಿದ್ದೇನೆ ಎಂದು ನೊಂದು ನುಡಿದರು.
ಸ್ಥಳೀಯರಾದ ಹೊದ್ದೇಟಿ ರಾಜೇಶ್ ಅವರ ಪ್ರಕಾರ ಈ ವಿಭಾಗದಲ್ಲಿ ಸುಮಾರು 60 ಕುಟುಂಬಗಳು ವಾಸಿಸುತ್ತಿದ್ದು ಇದೀಗ ಪ್ರವಾಹದಿಂದ ಎಲ್ಲ ಮನೆಗಳು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿರುವ ದರಿಂದ ಹಾಗೂ ಗದ್ದೆ, ತೋಟಗಳೂ ಜಲಾವೃತಗೊಂಡು ಕೊಚ್ಚಿಹೋಗಿರು ವದರಿಂದ ಎಲ್ಲರೂ ಗ್ರಾಮವನ್ನೇ ಬಿಟ್ಟಿದ್ದಾರೆ. ಅನೇಕರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರೆ, ಇನ್ನೂ ಕೆಲವರು ತಮ್ಮ ಸಂಬಂಧಿಗಳ ಮನೆಗಳಲ್ಲಿ ನೆಲೆಸಿದ್ದಾರೆ. ಈ ಪ್ರದೇಶಕ್ಕೆ ತೆರಳಬೇಕಾದರೆ ಮನೋಸ್ಥೈರ್ಯ ಬೇಕು ಎಂಬದು “ಶಕ್ತಿ ತಂಡಕ್ಕೆ ಸ್ಪಷ್ಟವಾಯಿತು. ಭೂಕುಸಿತ, ಗದ್ದೆಗಳ ಮೇಲೆ ಹರಿಯುತ್ತಿರುವ ಹೊಳೆಗಳು , ಕಾಲಿರಿಸಿದರೆ ಆಳಕ್ಕೆ ಎಳೆÀಯುವ ಮಣ್ಣಿನ ಹೂಳು- ನಿಜಕ್ಕೂ ಹೊಸಬರನ್ನು ಸ್ತಂಭೀಭೂತ ಗೊಳಿಸುತ್ತದೆ. ಆಂಧ್ರ ಪ್ರದೇಶದ ಎನ್ಡಿಆರ್ ಎಫ್ನ 30 ಮಂದಿಯ ತಂಡವು ಕಮಾಂಡರ್ ಆರ್.ಎಫ್À. ಚೌಧುರಿ ಅವರ ನೇತೃತ್ವದಲ್ಲಿ 2 ಗಂಟೆಗಳ ಕಾರ್ಯಾಚರಣೆ ನಡೆಸಿ ಶವವನ್ನು ಪತ್ತೆ ಹಚ್ಚಿ ಮೇಲೆತ್ತಿದರು. ಇವರಿಗೆ ಸೋಮವಾರಪೇಟೆ ತಾಲೂಕಿನ ಕಾವೇರಿ ಸೇನೆಯ ಕಾರ್ಯಕರ್ತರು ಶಾಂತವೇರಿ ವಸಂತ್, ಹೊಸಬೀಡು ಶಶಿ ನೇತೃತ್ವದಲ್ಲಿ ಸಹಕಾರವಿತ್ತರು. ಸಂತ್ರಸ್ತರ ನೆರವಿಗೆ ಆರ್.ಎಸ್.ಎಸ್.ನ ದಿನೇಶ್ ಮತ್ತಿತರರು ಕೈಜೋಡಿಸಿದ್ದು ಕಂಡು ಬಂದಿತು.
ಇತ್ತ ಮೇಘತ್ತಾಳುವಿನಲ್ಲಿ ಇಂದು ಭಾರತೀಯ ಸೇನಾ 15 ನೇ ದೋಂಗ್ರಾ ರೆಜಿಮೆಂಟ್ನ ಮೇಜರ್ ವಿಶ್ವಾಸ್ ನೇತೃತ್ವದಲ್ಲಿ ಕಾರ್ಯಾಚರಣೆÉ ನಡೆಯತು. ಮುಖ್ಯವಾಗಿ ಮಕ್ಕಂದೂರುವಿನ ವ್ಯಕ್ತಿಯೇ ಆದ ಮೇಜರ್ ಬಿದ್ದಪ್ಪ ಅವರ ಸಹಕಾರ ಎರಡು ಶವಗಳ ಪತ್ತೆಗೆ ಸಹಕಾರಿ ಯಾಯಿತು. ತಾಯಿ ಚಂದ್ರಾವತಿ ಹಾಗೂ ಅವರ ಪುತ್ರ ಮಡಿಕೇರಿಯಲ್ಲಿ ಆಟೋ ಚಾಲಕನಾಗಿದ್ದ ಉಮೇಶ್ ರೈ ಒಟ್ಟಿಗೇ ಭೂಗತರಾದ ಪ್ರಾಕೃತಿಕ ವಿಕೋಪದ ನೆನಪು ಮರುಕಳಿಸಿ ನೆರೆದವರ ಮನ ದು:ಖಭರಿತ ವಾಗಿತ್ತು. ಕೊನೆಗೆ ಶವಗಳಾದರೂ ದೊರಕಿ ಅಂತಿಮ ದರ್ಶನ ಪಡೆಯು ವಂತಾಯಿತಲ್ಲ ಎಂಬ ಭಾವದೊಂದಿಗೆ ಅಶ್ರುತರ್ಪಣ ಗೈದರು.