ಮಡಿಕೇರಿ, ಆ. 22: ಜಿಲ್ಲೆಯ ನಲವತ್ತೊಂದು ಆಶ್ರÀಯ ತಾಣಗಳಲ್ಲಿ ಸುಮಾರು ಏಳು ಸಾವಿರ ಸಂತ್ರಸ್ತರು ನೆಲೆಸಿದ್ದಾರೆ.ಹಲವು ತಾಣಗಳಲ್ಲಿ ಸಂಜೆ ಮಕ್ಕಳು, ವಿದ್ಯಾರ್ಥಿಗಳಿಗೆ ಚಿತ್ರಬರಹ, ಪಾಠ ನಡೆಯುತ್ತಿದೆ. ಚೇರಂಬಾಣೆ ಅರುಣ ಜೂನಿಯರ್ ಕಾಲೇಜಿನ ಶಿಬಿರದಲ್ಲಿ ಶಾಲಾ ಕೊಠಡಿಗಳು ಬೆಚ್ಚಗಿದ್ದು, ಚಾಪೆಯ ಮೇಲೆ ಆಟವಾಡುತ್ತಾ, ಚಿತ್ರ ಬಿಡಿಸುತ್ತಾ, ಮನೆಯಿಂದ ದೂರ ಇರುವೆರೆಂಬ ವಿಷಯವನ್ನೇ ಮರೆತಿದ್ದಾರೆ. ಅಧ್ಯಾಪಕಿಯೊಬ್ಬರು ತಮ್ಮ ಮಕ್ಕಳೊಂದಿಗೆ ಶಿಬಿರ ಸೇರಿದ್ದು, ಎಲ್ಲ ಮಕ್ಕಳಿಗೂ ಅನುಕೂಲವಾಗಿದೆ.ಮಡಿಕೇರಿಯ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಮಹೇಶ್ ಕುಮಾರ್ ಅವರ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಆರಂಭಗೊಂಡಿದೆ. ಗೆಜ್ಜೆ ಸಂಕÀಪ್ಪ ಕಲ್ಯಾಣ ಮಂಟಪದಲ್ಲಿ ಕೆ. ಜಯಲಕ್ಷ್ಮೀ ಅವರು ಮಕ್ಕಳಿಗೆ ಹಾಡು, ಸಂಗೀತ ಹೇಳಿಕೊಡುತ್ತಿದ್ದಾರೆ. (ಮೊದಲ ಪುಟದಿಂದ) ಮೈತ್ರಿ ಭವನದಲ್ಲಿ ಸರಕಾರದ ಮೂಲಕ ಯೋಗಾಸನ ತರಬೇತಿ ನಡೆದಿದೆ.
ಅಂಬೇಡ್ಕರ್ ಭವನದ ಶಿಬಿರದಲ್ಲಿ ನಿನ್ನೆ ದಿನ ಶಿಬಿರಾರ್ಥಿಗಳನ್ನೇ ಹುರಿದುಂಬಿಸಿ ಹಾಡು, ನೃತ್ಯ ಏರ್ಪಡಿಸಲಾಗಿತ್ತು. ಅಶೋಕಪುರ ಶ್ಯಾಂ ನಡೆಸಿದ ಕಾರ್ಯಕ್ರಮದಲ್ಲಿ ಬೆಳಗಾಂ ಮೂಲದ ಪೊಲೀಸ್ ಸಿಬ್ಬಂದಿ ಆರತಿ ಹಾಡಿದುದು ವಿಶೇಷವಾಗಿತ್ತು. ಶ್ಯಾಂ, ಕುಂಕುಂ, ಪ್ರೇಮ, ಬಾನು ಹಾಗೂ ಇತರರಿಂದ ಹಾಡು, ಮಕ್ಕಳ ನೃತ್ಯ ಸುಂದರವಾಗಿತ್ತು. ಕೃಪಾ ದೇವರಾಜ್ ಅವರಿಂದ ಪ್ರಾಣಾಯಾಮ ಮಾರ್ಗ ದರ್ಶನದೊಂದಿಗೆ ಕಾರ್ಯಕ್ರಮ ಮುಗಿದಾಗ ನಮಗೆ ನಿತ್ಯ ಹೀಗೇ ಕಾರ್ಯಕ್ರಮ ಏರ್ಪಡಿಸಿ ಎಂದು ಶಿಬಿರಾರ್ಥಿಗಳು ಹೇಳಿದಾಗ, ಅವರ ಕಷ್ಟ-ನಷ್ಟದ ದುಃಖದಿಂದ ಒಂದಷ್ಟು ಸಮಯ ಅವರು ಹೊರ ಬಂದುದು ಸಂಯೋಜಕರಿಗೆ ತೃಪ್ತಿ ತಂದಿತು.
ಇದೀಗ ಎಲ್ಲ ಶಿಬಿರಗಳಲ್ಲೂ ಯೋಗ ಕಾರ್ಯಕ್ರಮ ಕಡ್ಡಾಯವಾಗಿ ನಡೆಸಬೇಕೆಂದು ಸರಕಾರ ನಿರ್ದೇಶಿಸಿದೆ. ಅಧಿಕೃತ ಯೋಗ ಮಾರ್ಗದರ್ಶಕರನ್ನು ನಿಯೋಜಿಸಿದೆ. ಆದರೆ ನಿಯೋಜಿತರು ಬೆರಳೆಣಿಕೆಯಲ್ಲಿ ಇರುವದರಿಂದ ಹೊತ್ತಿಲ್ಲದ ಹೊತ್ತಿನಲ್ಲಿ ಯೋಗಾಭ್ಯಾಸ ನಡೆಸಲಾಗುತ್ತಿದೆ.