ಮಡಿಕೇರಿ, ಆ. 21: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗಿ ಹೋಗಿರುವ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಹಾಗೂ ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಸಂತ್ರಸ್ತರನ್ನು ಪತ್ತೆ ಹಚ್ಚುವ ಹಾಗೂ ನಾಪತ್ತೆಯಾಗಿರುವವರನ್ನು ಹುಡುಕುವ ಕಾರ್ಯಾಚರಣೆ ನಡೆಸಲಾಗಿದೆ.

ಗ್ರಾ.ಪಂ.ಯವರ ಕೋರಿಕೆ ಮೇರೆಗೆ ಕಳೆದ ತಾ. 16ರಂದು ಮನೆ ಸಹಿತ ಕಣ್ಮರೆಯಾಗಿರುವ ಹೆಮ್ಮೆತ್ತಾಳು ಗ್ರಾಮದ ಚಂದ್ರಾವತಿ ಹಾಗೂ ಪುತ್ರ ಉಮೇಶ್ ರೈ ಅವರುಗಳ ಮೃತದೇಹವನ್ನು ಹುಡುಕುವ ಕಾರ್ಯ ನಡೆಸಲಾಯಿತು. ಜಿಲ್ಲಾಡಳಿತದ ಮೂಲಕ ಅಗ್ನಿಶಾಮಕದಳದ ಸಹಕಾರದೊಂದಿಗೆ ಡ್ರೋನ್ ಕ್ಯಾಮೆರಾ ಬಳಸಿ ಪರಿಶೀಲಿಸಲಾಯಿತಾದರೂ ಯಾವದೇ ಸುಳಿವು ಲಭ್ಯವಾಗಿಲ್ಲ.

ಇತ್ತ ಮುಕ್ಕೋಡ್ಲುವಿನಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರ ಪುತ್ರ ಬೆಂಗಳೂರಿನಲ್ಲಿ ಏರೋ ಸ್ಪೇಸ್ ಇಂಜಿನಿಯರ್ ಆಗಿರುವ ನಿಶಾಂತ್ ಕುಶಾಲಪ್ಪ, ಸ್ನೇಹಿತರುಗಳಾದ ವಿನಾಯಕ್, ಮಲ್ಲಿಕಾರ್ಜುನ್, ಸುಧೀಪ್ ದೇವ್ ಅವರುಗಳು ಸೇರಿ ಸ್ವತಃ ತಯಾರಿಸಿರುವ ಎಲ್ಲಾ ಹವಾಮಾನಗಳಲ್ಲೂ ಬಳಸಬಹುದಾದ ಎರಡು ಬಗೆಯ ಡ್ರೋನ್ ಹಾಗೂ ಆಧುನಿಕ ಕ್ಯಾಮರಾ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭೂಕುಸಿತಗೊಂಡಿರುವ ಪ್ರದೇಶಗಳು ಸೆರೆಯಾಗಿದ್ದು, ಕೆಲವು ಒಂದೆರಡು ಕಡೆ ಮನುಷ್ಯರ ಓಡಾಟ ಹಾಗೂ ನಾಯಿಯ ಓಡಾಟ ಕಂಡುಬಂದಿ ರುವದಾಗಿ ನಿಶಾಂತ್ ಹೇಳುತ್ತಾರೆ. ತಂದೆ ರವಿಕುಶಾಲಪ್ಪ ಅವರ ಸೂಚನೆ ಮೇರೆಗೆ ತಾವುಗಳು ಕಾರ್ಯಾಚರಣೆಗೆ ಇಳಿದಿದ್ದು, ತಮ್ಮೊಂದಿಗೆ ರಕ್ಷಣಾ ಪಡೆಯವರಿದ್ದು, ಯಾರಾದರೂ ಸಂಕಷ್ಟಕ್ಕೆ ಸಿಲುಕಿದರೆ ರಕ್ಷಿಸುವ ವ್ಯವಸ್ಥೆ ಮಾಡಲಾಗುವದೆಂದು ತಿಳಿಸಿದ್ದಾರೆ.